ಹಿಂದೂ ಪುರಾಣ ಉದಾಹರಿಸಿ ಅತ್ಯಾಚಾರ ಉಲ್ಲೇಖ; ಅಸಂಬದ್ಧ ಪಾಠ ಮಾಡಿದ್ದ ಪ್ರೊಫೆಸರ್‌ ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಉಪನ್ಯಾಸದ ವೇಳೆ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಉಲ್ಲೇಖಗಳನ್ನು ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಅಮಾನತು ಮಾಡಿದೆ.
ಸಹಾಯಕ ಪ್ರಾಧ್ಯಾಪಕ ಡಾ.ಜಿತೇಂದ್ರ ಕುಮಾರ್ ಎಂಬುವವರು ಮಂಗಳವಾರ ತರಗತಿಯಲ್ಲಿ ಬೋಧಿಸುತ್ತಿದ್ದ ವೇಳೆ ಅತ್ಯಾಚಾರದ ವಿಚಾರವಾಗಿ ಪ್ರಸ್ತಾಪಿಸುತ್ತಾ, ಹಿಂದೂ ಪುರಾಣಗಳಲ್ಲಿನ ಅತ್ಯಾಚಾರದ ಉದಾಹರಣೆಗಳನ್ನು ನೀಡಿ ವಿಷ್ಣು, ಭಗವಾನ್ ಬ್ರಹ್ಮ ಮತ್ತು ಭಗವಾನ್ ಇಂದ್ರನ ಕುರಿತಾಗಿ ಅಶ್ಲೀಲವಾಗಿ ಉಲ್ಲೇಖಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಎಎಂಯು ಅಧಿಕಾರಿಗಳು ತಿಳಿಸಿದ್ದಾರೆ.
ಉಪನ್ಯಾಸದ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ನಂತರ ವಿವಾದ ಭುಗಿಲೆದ್ದಿದೆ. ಈ ವಿಚಾರ ವಿವಾದಗ್ರಸ್ತವಾಗುತ್ತಿದ್ದಂತೆ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದ ವಿವಿ, 24 ಗಂಟೆಯೊಳಗೆ ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಬಳಿಕ ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ರಚಿಸಿತ್ತು. ಆ ಬಳಿಕ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೋಟಿಸ್ ಬಂದ ನಂತರ ಎಎಂಯು ಉಪಕುಲಪತಿ ತಾರಿಕ್ ಮನ್ಸೂರ್ ಅವರಿಗೆ ಬುಧವಾರ ಕ್ಷಮೆಯಾಚಿಸಿ ಪತ್ರ ಬರೆದಿರುವ ಡಾ. ಕುಮಾರ್, ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಲ್ಲ, ಅತ್ಯಾಚಾರ ಹಲವು ವರ್ಷಗಳಿಂದ ನಮ್ಮ ಸಮಾಜವನ್ನು ಬಾಧಿಸುತ್ತಿದೆ ಎಂಬುದನ್ನು ಎತ್ತಿ ತೋರಿಸಲು ಪುರಾಣಗಳ ಘಟನಾವಳಿಗಳನ್ನು ಉಲ್ಲೇಖಿಸಿದ್ದೆ ಎಂದು ಹೇಳಿದ್ದಾರೆ. ಇದು ಅಚಾತುರ್ಯದಿಂದ ನಡೆದಿದೆ, ಮತ್ತೊಮ್ಮೆ ಇಂತಹ ಸನ್ನಿವೇಶಕ್ಕೆ ಆಸ್ಪದ ಕೊಡುವುದಿಲ್ಲ ಎಂದಿದ್ದರು.
ಈ ನಡುವೆ ಪ್ರೋ. ಕುಮಾರ್‌ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಎಂಯುನ ಮಾಜಿ ವಿದ್ಯಾರ್ಥಿ ಡಾ ನಿಶಿತ್ ಶರ್ಮಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಸಿವಿಲ್ ಲೈನ್ಸ್ ಠಾಣೆಯಲ್ಲಿ ಎಪ್‌ ಐ ಆರ್‌ ಸಹ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!