ಹೊಸದಿಗಂತ ವರದಿ ಮಡಿಕೇರಿ:
ವೀರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ ಮತ್ರು ಗಾಂಜಾ ಸರಬರಾಜು ಹಾಗೂ ಮಾರಾಟ ಮಾಡುತಿದ್ದ ಐದು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ತಿರುವಂಗಾಡು ನಿವಾಸಿ ಎಂ.ಕೆ.ಸುಜೇಶ್(44), ವೀರಾಜಪೇಟೆ ಮರೂರು ಗ್ರಾಮದ ಯು.ವೈ.ಜಬ್ಬರ್(38) , ಮೊಹಮ್ಮದ್ ಕುಂಞಿ( 48), ಕಣ್ಣೂರು ಜಿಲ್ಲೆಯ ಪಿಣರಾಯಿ ನಿವಾಸಿ ಜಂಶೀರ್ (37) , ತಲಚೇರಿ ಜಿಲ್ಲೆಯ ಎರನ್ನೋಳಿಯ ಸಿ.ಎ.ಶಮ್ಮಾಸ್(32) ಬಂಧನಕ್ಕೊಳಗಾದವರಾಗಿದ್ದು, ಆರೋಪಿಗಳಿಂದ 84 ಗ್ರಾಂ ಎಂಡಿಎಂಎ, 7 ಗ್ರಾಂ ಗಾಂಜಾ, ಬಲೇನೋ ಕಾರು, ಡಿಜಿಟಲ್ ತೂಕದ ಯಂತ್ರ, ಮಾದಕ ವಸ್ತು ಸೇವನೆಗೆ ಬಳಸುವ ಉಪಕರಣವನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಬಳಕೆ/ಮಾರಾಟ/ಸರಬರಾಜು ತಡೆಗಟ್ಟುವ ಹಿನ್ನೆಲೆಯಲ್ಲಿ ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ವೀರಾಜಪೇಟೆ ವೃತ್ತ ನಿರೀಕ್ಷಕ ಪಿ.ಅನೂಪ್ ಮಾದಪ್ಪ, ವೀರಾಜಪೇಟೆ ನಗರ ಪಿಎಸ್ಐ ಪ್ರಮೋದ್ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು.
ಭಾನುವಾರ ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಕಿರುಮಕ್ಕಿ-ಕಂಡಿಮಕ್ಕಿ ಜಂಕ್ಷನ್‌ನಲ್ಲಿ ನಿಷೇಧಿತ ಮಾದಕ ವಸ್ತುವನ್ನು ಸರಬರಾಜು/ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಈ ತಂಡ ಮಾಲು ಸಹಿತ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.