ಕೊನೆಗೊಂಡ ನಿಷೇಧಾಜ್ಞೆ: ನಿಟ್ಟುಸಿರು ಬಿಟ್ಟ ಕೊಡಗಿನ ಜನತೆ

ಹೊಸದಿಗಂತ ವರದಿ ಮಡಿಕೇರಿ:

ಜಿಲ್ಲೆಯಲ್ಲಿ ವಿಧಿಸಲಾಗಿದ್ದ ನಾಲ್ಕು ದಿನಗಳ ನಿಷೇಧಾಜ್ಞೆ ಶನಿವಾರ ಸಂಜೆಗೆ ಕೊನೆಗೊಂಡಿದ್ದು, ಕೊಡಗಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಬಳಿಕ ಉಂಟಾದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆ.26ರಂದು ಕಾಂಗ್ರೆಸ್‌ನಿಂದ ಮಡಿಕೇರಿ ಚಲೋ ಮತ್ತು ಬಿಜೆಪಿಯಿಂದ ಜನ ಜಾಗೃತಿ ಸಮಾವೇಶ ಘೋಷಣೆಯಾಗಿತ್ತು.

ಆದರೆ ಕೋಮು ಸೂಕ್ಷ್ಮ ಜಿಲ್ಲೆಯಾದ ಕೊಡಗಿನಲ್ಲಿ ಪರಿಸ್ಥಿತಿಯ ದುರ್ಲಾಭವನ್ನು ಪಡೆಯಲು ಹೊರಗಿನ ವ್ಯಕ್ತಿಗಳು ಹುನ್ನಾರ ನಡೆಸಿರುವುದು ಗೊತ್ತಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಆ. 24ರ ಬೆಳಗ್ಗೆ 6 ರಿಂದ ಆ.27 ಸಂಜೆಯ ತನಕ ನಿಷೇಧಾಜ್ಞೆ ಜಾರಿಗೊಳಿಸಿತ್ತು.

ಜಿಲ್ಲೆಯಲ್ಲಿ 4 ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನಜೀವನ ಎಂದಿನಂತೆಯೇ ಇತ್ತು. ಆದರೆ ಹೊರಗಿನ ಸಮಾಜಘಾತುಕರು ಜಿಲ್ಲೆಗೆ ನುಸುಳದಂತೆ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿಯೂ ಪೊಲೀಸ್ ಇಲಾಖೆಯಿಂದ ಹೆಚ್ಚಿನ ತಪಾಸಣೆಯೊಂದಿಗೆ ಹೈ ಅಲರ್ಟ್ ಘೋಷಿಸಲಾಗಿತ್ತು. ಇದರಿಂದಾಗಿ ಕೊಡಗಿನ ಪ್ರವಾಸೋದ್ಯಮದ ಮೇಲೂ ಕರಿನೆರಳು ಆವರಿಸಿತ್ತು. ಆದರೆ ಶನಿವಾರ ಸಂಜೆ 6 ಗಂಟೆಗೆ ನಿಷೇಧಾಜ್ಞೆ ಕೊನೆಕಗೊಂಡಿದ್ದು, ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಪೊಲೀಸ್ ಪಡೆಗಳೂ ಇದೀಗ ತಮ್ಮತಮ್ಮ ಜಿಲ್ಲೆಗಳತ್ತ ಪ್ರಯಾಣ ಬೆಳೆಸಿವೆ. ನಾಲ್ಕು ದಿನಗಳಿಂದ ಸ್ಥಗಿತವಾಗಿದ್ದ ವಾರದ ಸಂತೆಗಳೂ ಪುನರಾರಂಭಗೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!