ಕೊಡಗಿನಲ್ಲಿ ನಾಳೆ ನಿಷೇಧಾಜ್ಞೆ: ಕಾಂಗ್ರೆಸ್ ಮಡಿಕೇರಿ ಚಲೋ- ಬಿಜೆಪಿ ಸಮಾವೇಶಕ್ಕೆ ಜಿಲ್ಲಾಡಳಿತ ಬ್ರೇಕ್

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆ.24ರ ಮುಂಜಾನೆಯಿಂದ 27ರ ಸಂಜೆಯವರೆಗೆ ನಿಷೇಧಾಜ್ಞೆ ವಿಧಿಸುವ ಮೂಲಕ ಕಾಂಗ್ರೆಸ್’ನ ಮಡಿಕೇರಿ ಚಲೋ ಹಾಗೂ ಬಿಜೆಪಿಯ ಜನ ಜಾಗೃತಿ ಸಮಾವೇಶಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಸೋಮವಾರ ರಾತ್ರಿ ಈ ಸಂಬಂಧ ಆದೇಶ ಹೊರಡಿಸಿರುವ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು,ಆ.24ರ ಬೆಳಗ್ಗೆ 6ಗಂಟೆಯಿಂದ 27ರ ಸಂಜೆ 6ಗಂಟೆಯವರೆಗೆ ಜಿಲ್ಲೆಯಾದ್ಯಂತ ಪೂರ್ವ ಯೋಜಿತ ಮದುವೆ, ಗೃಹಪ್ರವೇಶ ಕಾರ್ಯಕ್ರಮ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಯಾವುದೇ ಸಭೆ ಸಮಾರಂಭಗಳನ್ನು ನಡೆಸಬಾರದು ಎಂದು ಸೂಚಿಸಿದ್ದಾರೆ.
ಅಲ್ಲದೆ ಯಾವುದೇ ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಜಾಥಾ ನಡೆಸುವುದು, 5 ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ವಿಜಯೋತ್ಸವ ನಡೆಸುವುದು, ಪಟಾಕಿ ಸಿಡಿಸುವುದು, ಪ್ರತಿಭಟನಾತ್ಮಕವಾಗಿ ಕಪ್ಪು ಬಟ್ಟೆ ಧರಿಸುವುದು ಮತ್ತು ಕಪ್ಪು ಬಾವುಟ ಹಿಡಿಯುವುದು, ಧ್ವನಿವರ್ಧಕ ಬಳಸಿ ಪ್ರಚೋದನಾತ್ಮಕ ಘೋಷಣೆ ಕೂಗುವುದನ್ನು ಕೂಡಾ ನಿಷೇಧಿಸಿದ್ದಾರೆ.
ವಾಹನಗಳಲ್ಲಿ ಪ್ರಚೋದನಾತ್ಮಕ ಫಲಕ/ಬಾವುಟಗಳನ್ನು ಅಳವಡಿಸುವುದು ಹಾಗೂ ಯಾರೇ ವ್ಯಕ್ತಿ ಆಯುಧಗಳನ್ನು ಹೊಂದಿರುವುದು ಮತ್ತು ಸಾರ್ವಜನಿಕವಾಗಿ ತಿರುಗಾಡುವುದು, ಯಾವುದೇ ರೀತಿಯ ಭಾಷಣವನ್ನು ಮತ್ತು ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಸಂತೆ ಜಾತ್ರೆಯನ್ನೂ ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ.
ಆ.18ರಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬಿಜೆಪಿ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ, ಘೋಷಣೆ ಕೂಗಿ, ಸಾರ್ವಕರ್ ಚಿತ್ರ ತೋರಿಸಿ, ಮೊಟ್ಟೆ ಎಸೆದಿರುವ ಘಟನೆ ನಡೆದಿದ್ದು,ಆ.26ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಜಿಲ್ಲಾ ಪೊಲೀಸ್ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಇತರ ಜಿಲ್ಲೆಗಳಿಂದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಂಡೋತಂಡವಾಗಿ ಆಗಮಿಸುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ಮತ್ತು ಅದೇ ದಿನ ಬಿಜೆಪಿ ಪಕ್ಷದ ವತಿಯಿಂದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿರುವ ಜನ ಜಾಗೃತಿ ಸಮಾವೇಶಕ್ಕೂ ಒಂದು ಲಕ್ಷ ಕಾರ್ಯಕರ್ತರನ್ನು ಸೇರಿಸಲು ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಗಳನ್ನು ಮನಗಂಡು ಮುಂಜಾಗ್ರತಾ ಕ್ರಮವಾಗಿ ಈ ನಿಷೇಧಾಜ್ಞೆ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕೊಡಗು ಜಿಲ್ಲೆ ಮತೀಯವಾಗಿ ಸೂಕ್ಷ್ಮ ಪ್ರದೇಶವಾಗಿದ್ದು, 1997ರಲ್ಲಿ ವೀರಾಜಪೇಟೆ ನಗರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಾದ್ಯಂತ ಕೋಮು ಗಲಭೆ ಉಂಟಾಗಿತ್ತು.. ಅಲ್ಲದೆ 2001ರಲ್ಲಿ ಪಾಲೂರು ಹರೀಶ್ಚಂದ್ರ ದೇವಸ್ಥಾನ ಭಗ್ನಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಾ ಕೊಡಗಿನಾದ್ಯಂತ ಕೋಮು ಗಲಭೆಯಾಗಿತ್ತು. 2015ರ ನ.10ರಂದು ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಮತ್ತು ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕು ಕೇಂದ್ರಗಳಲ್ಲಿ ನಡೆಸಲುದ್ದೇಶಿಸಿದ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಹಿಂದು ಸಂಘಟನೆಗಳು ಕೊಡಗು ಬಂದ್‌ಗೆ ಕರೆ ಕೊಟ್ಟು ಆಚರಣೆಯ ವಿರುದ್ಧ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಿದ್ದು, ಆ ಸಂದರ್ಭದಲ್ಲಿ ಎರಡು ಗುಂಪಿನ ನಡುವೆ ಗಲಭೆ ಉಂಟಾಗಿ ಜಿಲ್ಲೆಯಾದ್ಯಂತ 47 ಪ್ರಕರಣಗಳು ದಾಖಲಾಗುವುದರೊಂದಿಗೆ, ಇಬ್ಬರು ಸಾವಿಗೀಡಾಗಿದ್ದರು. ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದರಿಂದ ಸುಮಾರು ಒಂದು ತಿಂಗಳ ಕಾಲ ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು.
ಬಳಿಕ 2016, 2017 ಹಾಗೂ 2018 ನೇ ಸಾಲಿನಲ್ಲಿಯೂ ಟಿಪ್ಪು ಜಯಂತಿ ಆಚರಣೆಯನ್ನು ನಿಷೇದಾಜ್ಞೆಯ ನಡುವೆ ಬಿಗಿ ಪೊಲೀಸ್ ಬಂದೋಬಸ್ಸಿನಲ್ಲಿ ಆಚರಿಸಲಾಗಿದ್ದು, ಆ ವರ್ಷಗಳಲ್ಲಿಯೂ ಹಲವು ಹಿಂದೂ ಸಂಗಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು ಎಂಬುದನ್ನು ಜಿಲ್ಲಾಡಳಿತ ಉಲ್ಲೇಖಿಸಿದೆ..
ಸದರಿ ವರ್ಷಗಳಲ್ಲಿಯೂ…
ಇತ್ತೀಚೆಗೆ ಬೆಳ್ಳಾರೆಯಲ್ಲಿ ನಡೆದ ಪ್ರವೀಣ ನೆಟ್ಟಾರು, ಮಸೂದ್, ಶಿವಮೊಗ್ಗದಲ್ಲಿ ಹರ್ಷ, ಸುರತ್ಕಲ್‌ನ ಫಾಜಿಲ್ ಹತ್ಯೆಯ ಸಂದರ್ಭದಲ್ಲೂ ಕೊಡಗು ಜಿಲ್ಲೆಯ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಶಿವಮೊಗ್ಗದಲ್ಲಿ ಇತ್ತೀಚೆಗೆ ಸಾವರ್ಕರ್ ವರ ಭಾವಚಿತ್ರವಿರುವ ಪ್ಲೆಕ್ಸ್‌ನ್ನು ತೆರವುಗೊಳಿಸಿದ ವಿಚಾರದಲ್ಲೂ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ಕಂಡು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ, ರಾಜಕೀಯ ಮತ್ತು ಮತೀಯವಾಗಿ ಸೂಕ್ಷ್ಮವಾದ ಕೊಡಗು ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕ ಸಭೆ, ಮೆರವಣಿಗೆ, ಪ್ರತಿಭಟನೆಗಳಿಗೆ ಅವಕಾಶ ನೀಡಿದಲ್ಲಿ ಕೋಮು ಗಲಭೆ ಉಂಟಾಗುವ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟಾಗುವ, ಜಿಲ್ಲೆಯಲ್ಲಿ ಶಾಂತಿ ಕದಡುವ, ಸಾರ್ವಜನಿಕರ ದೈನಂದಿನ ಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಜಿಲ್ಲಾಡಳಿತ ಅಭಿಪ್ರಾಯಪಟ್ಟಿದೆ.
ಮದ್ಯ ಮಾರಾಟಕ್ಕೂ ಬ್ರೇಕ್: ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಆ.24ರ ಮಧ್ಯರಾತ್ರಿ 12 ಗಂಟೆಯಿಂದ 26ರ ದಿನಾಂಕ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ಮದ್ಯದ ಅಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್ ಮತ್ತು ಕ್ಲಬ್‌ಗಳಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!