ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲಾವೋಸ್‌ನ ಬೊಕಿಯೊ ಪ್ರಾಂತ್ಯದ ಗೋಲ್ಡನ್ ಟ್ರಯಾಂಗಲ್ ಸ್ಪೆಷಲ್ ಎಕನಾಮಿಕ್ ಝೋನ್ (SEZ) ನಲ್ಲಿರುವ ಸೈಬರ್ ಹಗರಣ ಕೇಂದ್ರಗಳಲ್ಲಿ ಸಿಕ್ಕಿಬಿದ್ದಿದ್ದ 47 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಆಗ್ನೇಯ ಏಷ್ಯಾ ರಾಷ್ಟ್ರದಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ.
ಇಲ್ಲಿಯವರೆಗೆ ಭಾರತೀಯ ಮಿಷನ್ ಲಾವೋಸ್‌ನಿಂದ 635 ಭಾರತೀಯರನ್ನು ರಕ್ಷಿಸಲು ಸಹಾಯ ಮಾಡಿದ್ದು ಅವರು ಸುರಕ್ಷಿತವಾಗಿ ಮನೆಗೆ ಮರಳುವುದನ್ನು ಖಚಿತಪಡಿಸಿದೆ. ಭಾರತೀಯ ಅಧಿಕಾರಿಗಳು ಲಾವೋಸ್‌ನಲ್ಲಿನ “ನಕಲಿ ಉದ್ಯೋಗ ಆಫರ್” ಬಗ್ಗೆ ಜಾಗರೂಕರಾಗಿರಲು ನಾಗರಿಕರಿಗೆ ಸಲಹೆ ನೀಡಿದ್ದಾರೆ. ಅದೇ ವೇಳೆ ಈ ಮೋಸಗಳಿಗೆಬಲಿಯಾಗುವುದನ್ನು ತಪ್ಪಿಸಲು ಎಚ್ಚರಿಕೆಯಿಂದ ಪರಿಶೀಲನೆಯ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಬೊಕಿಯಾ ಪ್ರಾಂತ್ಯದ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯ (SEZ) ವ್ಯಾಪ್ತಿಯಲ್ಲಿ ಸೈಬರ್ ಹಗರಣ ಕೇಂದ್ರಗಳಲ್ಲಿ ಸಿಕ್ಕಿಬಿದ್ದ 47 ಭಾರತೀಯರನ್ನು ರಾಯಭಾರ ಕಚೇರಿ ರಕ್ಷಿಸಿದೆ. ಗೋಲ್ಡನ್ ಟ್ರಯಾಂಗಲ್ SEZ ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಅವರ ಶಿಸ್ತುಕ್ರಮದ ನಂತರ ಲಾವೋಸ್ ಅಧಿಕಾರಿಗಳು 29 ಮಂದಿಯನ್ನ ರಾಯಭಾರ ಕಚೇರಿಗೆ ಹಸ್ತಾಂತರಿಸಿದ್ದಾರೆ. ಆದರೆ ಇತರ 18 ಜನರು ಸಹಾಯ ಕೋರಿ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾಗಿ ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದೆ.
ವಂಚಕರು ಜನರನ್ನು ಆಕರ್ಷಿಸುವ ಸಲುವಾಗಿ ಡೇಟಿಂಗ್ ಆಯಪ್ನಲ್ಲಿ ಮಹಿಳೆಯರಂತೆ ಚಾಟ್ ಮಾಡುತ್ತಾರೆ. ಬಳಿಕ ಕ್ರಿಪ್ಟೋಕರೆನ್ಸಿ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಎಷ್ಟೆಲ್ಲಾ ಆದಾಯ ಎಂಬುದರ ಬಗ್ಗೆ ಬ್ರೈನ್ವಾಷ್ ಮಾಡುತ್ತಾರೆ. ಭಾರತದಲ್ಲಿ ಅನೇಕರನ್ನು ಈ ರೀತಿ ವಂಚಿಸಲಾಗಿದೆ ಎಂದು ರಕ್ಷಿಸಲ್ಪಟ್ಟ ಭಾರತೀಯರಲ್ಲಿ ಒಬ್ಬರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ರಾಜಧಾನಿ ವಿಯೆಂಟಿಯಾನ್‌ನಿಂದ ಬೋಕಿಯೊಗೆ ಸ್ಥಳೀಯ ಅಧಿಕಾರಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ತೆರಳಿದರು. ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರಿಯಾಗಿರುವ ಪ್ರಶಾಂತ್ ಅಗರವಾಲ್ ಅವರು ಪಾರಾದ ತಂಡವನ್ನು ಭೇಟಿಯಾಗಿ ಅವರು ಎದುರಿಸಿದ ಸವಾಲುಗಳನ್ನು ಚರ್ಚಿಸಲು ಮತ್ತು ಮುಂದಿನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ರಾಯಭಾರ ಕಚೇರಿಯು ಲಾವೋಸ್ ಅಧಿಕಾರಿಗಳೊಂದಿಗೆ ರಕ್ಷಿಸಲ್ಪಟ್ಟವರನ್ನು ಭಾರತಕ್ಕೆ ಕಳುಹಿಸಲು ಮಾಡಬೇಕಾದ ಕ್ರಮಗಳನ್ನು ಪೂರ್ಣಗೊಳಿಸಿದೆ. ರಕ್ಷಿಸಲ್ಪಟ್ಟವರಲ್ಲಿ 30 ಮಂದಿ ಈಗಾಗಲೇ ಭಾರತಕ್ಕೆ ಕಳುಹಿಸಲಾಗಿದೆ.ಉಳಿದ 17 ಮಂದಿ ಅಂತಿಮ ಪ್ರಯಾಣದ ವ್ಯವಸ್ಥೆಗಾಗಿ ಕಾಯುತ್ತಿದ್ದು ಅವರು ಶೀಘ್ರದಲ್ಲೇ ಹೊರಡಲಿದ್ದಾರೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.