ಇಂಗ್ಲೆಂಡ್‌ ಸ್ಮೆಥ್‌ವಿಕ್‌ ಹಿಂದೂ ದೇವಾಲಯದೆದುರು ಪ್ರತಿಭಟನೆ: ಕೇಳಿತು ʼಅಲ್ಲಾಹು ಅಕ್ಬರ್‌ʼ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಹೇಳಲಾದ ಸುಮಾರು 200 ಜನರು ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಸ್ಮೆಥ್‌ವಿಕ್ ಪಟ್ಟಣದ ಹಿಂದೂ ದೇವಾಲಯದ ಹೊರಗೆ ಮಂಗಳವಾರದಂದು ಯೋಜಿತ ಪ್ರತಿಭಟನೆ ನಡೆಸಿವೆ ಎಂದು ಮೂಲಗಳು ವರದಿ ಮಾಡಿವೆ.

ಸ್ಪೋನ್ ಲೇನ್‌ನಲ್ಲಿರುವ ದುರ್ಗಾ ಭವನ ಹಿಂದೂ ಕೇಂದ್ರದ ಕಡೆಗೆ ಹೆಚ್ಚಿನ ಸಂಖ್ಯೆಯ ಜನರ ಮೆರವಣಿಗೆಯ ಮೂಲಕ ಸಾಗುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳು ತೋರಿಸಿವೆ. ಈ ವೇಳೆ ಅನೇಕರು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ. ಕಾನೂನು ಜಾರಿ ಸಿಬ್ಬಂದಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದಂತೆ, ಕೆಲವು ಪ್ರತಿಭಟನಾಕಾರರು ಗೋಡೆಗಳನ್ನು ಹತ್ತುತ್ತಿರುವುದೂ ಕೂಡ ಕಂಡುಬಂದಿದೆ.

ಬರ್ಮಿಂಗ್‌ಹ್ಯಾಮ್ ವರ್ಲ್ಡ್‌ನ ವರದಿಯ ಪ್ರಕಾರ, ಅಪ್ನಾ ಮುಸ್ಲಿಮ್ಸ್ ಎಂಬ ಸಾಮಾಜಿಕ ಮಾಧ್ಯಮ ಖಾತೆಯು ಮಂಗಳವಾರ ದುರ್ಗಾ ಭವನದ ದೇವಸ್ಥಾನದ ಹೊರಗೆ “ಶಾಂತಿಯುತ ಪ್ರತಿಭಟನೆ” ಗೆ ಕರೆ ನೀಡಿದೆ.

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಪೂರ್ವ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಯ ಬೆನ್ನಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ. ನಗರದಲ್ಲಿನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಮತ್ತು ಅದರ ಹೊರಗಿನ ಕೇಸರಿ ಧ್ವಜವನ್ನು ಅಪರಿಚಿತ ವ್ಯಕ್ತಿಗಳು ಎಳೆದಿದ್ದಾರೆ ಎಂಬ ವರದಿಗಳೂ ಕೇಳಿ ಬಂದಿವೆ.

ಲೀಸೆಸ್ಟರ್‌ನಲ್ಲಿ ನಡೆದಿತ್ತು ಗಲಭೆ:
ಆಗಸ್ಟ್ ಅಂತ್ಯದಲ್ಲಿ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಇದನ್ನು ಅಲ್ಲಿನ ಪೋಲೀಸರು ಆಕ್ರಮಣಶೀಲತೆ ಎಂದು ಗುರುತು ಮಾಡಿದ್ದರು.

ಇದರ ನಂತರ, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಭಾರತೀಯ ಸಮುದಾಯದ ವಿರುದ್ಧದ ಹಿಂಸಾಚಾರವನ್ನು ಖಂಡಿಸಿ ಮತ್ತು ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಬಲವಾಗಿ ಆಗ್ರಹಿಸಿ ಹೇಳಿಕೆ ನೀಡಿತ್ತು

ಲೀಸೆಸ್ಟರ್ ಗಲಭೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!