ಹೊಸ ದಿಗಂತ ವರದಿ, ಕಾರವಾರ:
ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಗುರುವಾರ ವಕ್ಫ್ ಬೋರ್ಡ್ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ, ಪ್ರತಿಭಟನೆ ನಡೆಯಿತು.
ಕಾರವಾರ ರಾಮಕೃಷ್ಣಾಶ್ರಮದ ಶ್ರೀ ಭಾವೇಶಾನಂದಸ್ವಾಮಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ ನಮ್ಮ ಭೂಮಿ – ನಮ್ಮ ಹಕ್ಕು ಧರಣಿಗೆ ಚಾಲನೆ ನೀಡಿದರು.
ರಾಜ್ಯ ಬಿ ಜೆ ಪಿ ಉಪಾಧ್ಯಕ್ಷರು, ನಿಕಟ ಪೂರ್ವ ಶಾಸಕಿ ರೂಪಾಲಿ ಸಂತೋಷ ನಾಯ್ಕ್ ಮಾತನಾಡಿ, ಇಂದಿನ ಕಾಂಗ್ರೆಸ್ ಸರಕಾರ ಸಾರ್ವಜನಿಕ ಆಸ್ತಿಯನ್ನು ಕಬಳಿಸುತ್ತ ಬಡವರನ್ನು ಅತಂತ್ರರನ್ನಾಗಿ ಮಾಡುತ್ತಿದೆ. ಭ್ರಷ್ಟತೆ ಯನ್ನು ಮೈಗೂಡಿಸಿಕೊಂಡಿರುವ ಕಾಂಗ್ರೆಸ್ ಸರಕಾರ ಬಡವರ ರಕ್ತ ಹೀರಿ ಬಿ.ಪಿ.ಎಲ್ ಕಾರ್ಡನ್ನು ರದ್ದು ಗೊಳಿಸುತ್ತಿದೆ. ಈ ಬಗ್ಗೆ ಜನ ಜಾಗೃತ ರಾಗದಿದ್ದರೆ ಉಳಿಗಾಲವಿಲ್ಲ ಎಂದರು.
ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ , ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ, ಕೆ.ಜಿ.ನಾಯ್ಕ, ವಕ್ತಾರ ಹರಿಪ್ರಕಾಶ್ ಕೋಣಿಮನೆ, ಎಸ್ ಸಿ ಮೋರ್ಚಾ ಸಂತೋಷ ತಲ್ವಾರ್, ಓ ಬಿ ಸಿ ಮೋರ್ಚಾದ ರಾಜೇಂದ್ರ ನಾಯ್ಕ್, ಜಿಲ್ಲಾ ಮಹಿಳಾ ಮೋರ್ಚಾ ದ ಶಿವಾನಿ ಶಾಂತರಾಮ,ಎಸ್ ಸಿ ಮೋರ್ಚಾ ದ ಉದಯ ಬಸಟ್ಟಿ, ಹಾಗೂ ಶ್ರೀಕಾಂತ್ ನಾಯ್ಕ್ ಭಟ್ಕಳ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು, ಪ್ರಮುಖರು, ಪದಾಧಿಕಾರಿಗಳು, ವಿವಿಧ ಸಂಘಟನೆಯ ಮುಖ್ಯಸ್ಥರು, ಸಾರ್ವಜನಿಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.