ಹೊಸ ದಿಗಂತ ವರದಿ, ವಿಜಯನಗರ:
ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ಪ್ರವರ್ಗ ೨ಎ ಮೀಸಲಾತಿ ಕಲ್ಪಿಸುವ ಮೂಲಕ ನಮ್ಮ ಸಮಾಜದ ಋಣ ತೀರಿಸಿಕೊಳ್ಳಲಿ. ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಹೊಸಪೇಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಗಾಗಿ ನಾವು ೭ನೇ ಹಂತದ ಹೋರಾಟ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೀಸಲಾತಿ ಜಾರಿ ಮಾಡುತ್ತದೆ ಎಂಬ ನಂಬಿಕೆ ಇತ್ತು. ಅದು ಹುಸಿಯಾಗಿದೆ. ಹೀಗಾಗಿ ಡಿಸೆಂಬರ್ ೧೦ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು ೫ ಸಾವಿರ ಟ್ರ್ಯಾಕ್ಟರ್ ಗಳಲ್ಲಿ ಲಕ್ಷಾಂತರ ಜನ ಪಂಚಮಸಾಲಿಗಳು ಬೆಳಗಾವಿಗೆ ಬರಲಿದ್ದಾರೆ. ಮುಖ್ಯಮಂತ್ರಿ ಅವರು ಮೀಸಲಾತಿ ಕುರಿತು ಸ್ಪಷ್ಟ ಭರವಸೆ ಕೊಡುವವರೆಗೆ ಈ ಹೋರಾಟ ನಿರಂತರ ಮುಂದುವರಿಯಲಿದೆ. ಯಾರೂ ಕುತಂತ್ರಕ್ಕೆ ಮಣಿಯಬಾರದು. ಎಲ್ಲರೂ ಹೋರಾಟಕ್ಕೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.
ವಕ್ಫ್ ಮಂಡಳಿ ಆ ಧರ್ಮಕ್ಕೆ ಸಂಬoಧಿಸಿದ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಅನ್ನ ಕೊಡುವ ಅಮಾಯಕ ರೈತರ ಭೂಮಿ ಕಸಿಯುವ ಹುನ್ನಾರ ಸಲ್ಲದು. ಅನ್ಯಾಯ, ಅಕ್ರಮದ ಭೂಮಿ ಒಡೆತನಕ್ಕೆ ವಿರೋಧವಿದೆ. ರೈತರಿಗೆ ಅನ್ಯಾಯವಾದಾಗ ಅವರ ಪರವಾಗಿಯೇ ಇರುತ್ತೇವೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಭರವಸೆ ನೀಡಿದರು.