ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ 5000 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರಕಾರಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಆದೇಶವನ್ನು ಖಂಡಿಸಿ ಕೆ.ಆರ್.ಎಸ್ ಡ್ಯಾಂ ಬಳಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು, ಹಾಗೂ ರೈತ ನಾಯಕರು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಲ್ಲಿ ನಮಗೇ ಕುಡಿಯಲು ನೀರಿಲ್ಲ, ಹೀಗಿರುವಾಗ ತಮಿಳುನಾಡಿಗೆ ನೀರು ಹೇಗೆ ಬಿಡುತ್ತೀರಿ. ಎಂದು ಆಕ್ರೋಶ ಹೊರಹಾಕಿದರು. ತೀರ್ಪು ನೀಡಿರುವ ನ್ಯಾಯಾಧೀರಕರಣಲ್ಲಿ ಇರುವರಿಗೆ ಬುದ್ದಿ ಜ್ಞಾನ ಇಲ್ಲ, ಇತ್ತ ನಮ್ಮ ರಾಜ್ಯ ಸರ್ಕಾರ ತಮಿಳುನಾಡಿನ ಸ್ನೇಹಕ್ಕಾಗಿ ಅವರಿಗೆ ಬೇಕಾದಂತೆ ನೀರು ಬಿಡುತ್ತಿದ್ದಾರೆ ಎಂದು ಸರ್ಕಾರ ಹಾಗೂ ಸಮಿತಿ ವಿರುದ್ಧ ಧಿಕ್ಕಾರ ಕೂಗಿದರು.
ಈಗಾಗಲೇ ಅದೆಷ್ಟೋ ಸಲ ತಮಿಳುನಾಡಿಗೆ ನೀರು ಬಿಟ್ಟಾಗಿದೆ. ಇದೀಗ ಸರಿಯಾಗಿ ಮಳೆಯಿಲ್ಲ ಹೀಗಿರುವಾಗ ಹದಿನೈದು ದಿನಗಳ ಕಾಲ ಐದು ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಿ ಎಂದು ಕಾವೇರಿ ನಿರ್ವಹಣಾ ಸಮಿತಿಯು ಆದೇಶಿಸಿರುವುದು ಖಂಡನೀಯ. ಇದು ಹೀಗೆ ಮುಂದುವರಿದರೆ, ಇಲ್ಲಿನ ರೈತರ ಬದುಕಿನ ಪ್ರಶ್ನೆ ಏನು? ಈ ಸರ್ಕಾರಕ್ಕೆ ರೈತರ ಹಿತ ಬೇಕಾಗಿಲ್ಲ ಎಂದು ರೈತ ಮುಖಂಡರು ಖಾರವಾಗಿ ಮಾತನಾಡಿದರು.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.