ವಿದ್ಯುತ್ ಬೆಲೆ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೃಷಿ ಕೂಲಿಕಾರರ ಪ್ರತಿಭಟನೆ

ಹೊಸದಿಗಂತ ವರದಿ ಮಂಡ್ಯ :
ಇಲಾಖೆಗಳಲ್ಲಿ ಬಡವರ ಕೆಲಸವಾಗುತ್ತಿಲ್ಲ, ಹೆಚ್ಚಿಸಿರುವ ವಿದ್ಯುತ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹೆಚ್ಚಿಸಿರುವ ವಿದ್ಯುತ್ ದರವನ್ನು ವಾಪಸ್ಸು ಪಡೆಯಬೇಕು. ಸೌಭಾಗ್ಯ, ದೀನದಯಾಳ್‌ ಉಪಾಧ್ಯಾ ಯೋಜನೆ ಹಾಗೂ ಇತ್ಯಾದಿ ಯೋಜನೆಯಲ್ಲಿ ವಿದ್ಯುತ್ ಕಲ್ಪಿಸಿರುವ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಕಡಿತ ಮಾಡುತ್ತಿದ್ದು, ಯಾವುದೋ ಒಂದು ತಿಂಗಳಲ್ಲಿ 40 ಯೂನಿಟ್‌ಗಿಂತ ಹೆಚ್ಚಾದರೆ ಈ ಯೋಜನೆಯಿಂದ ಕೈಬಿಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು. ‌

ಈ ಯೋಜನೆಗಳ ಫಲಾನುಭವಿಗಳಿಗೆ ವಿದ್ಯುತ್ ಕಡಿತ ಮಾಡುವುದು, ಮಕ್ಕಳ ಶೈಕ್ಷಣಿಕ ದೃಷ್ಠಿಯಿಂದ ನಿಲ್ಲಬೇಕು. 12 ತಿಂಗಳು ಬಳಸಿದ ವಿದ್ಯುತ್‌ನ್ನು ಸರ್ಕಾರ ನೀಡಿರುವ 480 ಯೂನಿಟ್‌ನಲ್ಲಿ ಕಳೆಯಬೇಕು ಬಾಕಿ ಹಣ ಮತ್ತು ಬಳಕೆ ವಿದ್ಯುತ್ ಹಣ ಕಟ್ಟಿಸಿಕೊಂಡು ಬ್ಯಾಂಕ್‌ಗೆ ಜಮಾ ಮಾಡುವ ಪದ್ಧತಿ ಮತ್ತು ಮೀಟರೀಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ವಿಪರೀತ ಗ್ಯಾಸ್ ಬೆಲೆ ಹೆಚ್ಚಳದಿಂದ ಬಡವರು ಹೈರಾಣಾರಾಗಿದ್ದು, ಅಡುಗೆಗೆ ವಿದ್ಯುತ್ ಬೆಳಕಿನ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸ ಮಾಡಲು, ಊಟ ಮಾಡಲು ಬೆಳಕಿಗಾಗಿ ತಲಾ ಮೂರು ಲೀಟರ್ ಸೀಮೆಎಣ್ಣೆ ವಿತರಿಸಬೇಕು. ಆರೇಳು ತಿಂಗಳಿಂದ ಸ್ಥಗಿತಗೊಂಡಿರುವ ಹೊಸ ರೇಷನ್ ಕಾರ್ಡ್ ವಿತರಿಸಬೇಕು ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತರಿಯಡಿ ಆನ್‌ಲೈನ್ ಜಾರಿ, 10 ರೂ. ಸಲಕರಣೆ ಕಡಿತ ಜಾರಿ ಮಾಡಿದ್ದು ಕೂಲಿಕಾರರು ಈ ಕಾಯ್ದೆಯಿಂದ ದೂರವಾಗುತ್ತಿದ್ದಾರೆ. ಈ ನೀತಿಗಳನ್ನು ಕೈಬಿಡಬೇಕು. ಸಮರ್ಪಕವಾಗಿ ಕೆಲಸ ನೀಡಬೇಕು. ದಿನದ ಕೂಲಿ 600 ರೂ. ಆಗುವವರೆಗೆ ಈ ತಿಂಗಳಿನಿಂದ 100 ರೂ. ಕೂಲಿಯನ್ನು ಹಿಂದಿನ ಕೂಲಿಗೆ ಸೇರಿಸಿ ಕೊಡಬೇಕು. ಕಾಯಕಬಂಧುಗಳ 2013ರಿಂದ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ಮತ್ತು ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.

ಬೆಲೆ ಹೆಚ್ಚಳದ ಭೂತ ಎಲ್ಲರನ್ನೂ ಸವಾರಿ ಮಾಡುತ್ತಿದ್ದು ಇದನ್ನು ಸರ್ಕಾರ ನಿಯಂತ್ರಿಸಬೇಕು. ಕೃಷಿ ಕೂಲಿಕಾರರು ಉಪ ಕಸುಬು ಕೈಗೊಂಡು ಆರ್ಥಿಕ ಸ್ವಾವಲಂಬನೆಗೊಳ್ಳಲು ಬ್ಯಾಂಕುಗಳಿಂದ ಕುಟುಂಬಕ್ಕೊಂದು ಲಕ್ಷ ಸಾಲ ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಒಂದು ವಾರದೊಳಗೆ ಇತ್ಯರ್ಥಪಡಿಸಿ ಜಿಲ್ಲೆಯ ಕೃಷಿ ಕೂಲಿಕಾರರು ಮತ್ತು ಬಡ ರೈತರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ. ಪುಟ್ಟಮಾಧು, ರಾಜ್ಯ ಸಹ ಕಾರ್ಯದರ್ಶಿ ಕೆ. ಹನುಮೇಗೌಡ, ಜಿಲ್ಲಾ ಪ್ರಧಾನಕಾರ್ಯದರ್ಶಿ ಬಿ. ಹನುಮೇಶ್, ಜಿಲ್ಲಾ ಉಪಾಧ್ಯಕ್ಷ ಎನ್. ಸುರೇಂದ್ರ, ಎನ್. ಶಿವಕುಮಾರ್, ಸಿ. ಕುಮಾರಿ, ಮುಖಂಡರಾದ ಶುಭಾವತಿ, ಅನಿತಾ, ಮಂಚೇಗೌಡ, ಅರುಣ್, ಸಂತೋಷ್, ಪ್ರೇಮ, ಪಾಪಣ್ಣ, ಅಬ್ದುಲ್ಲಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!