ಹೊಸದಿಗಂತ ವರದಿ ಅಂಕೋಲಾ:
ಸೀಬರ್ಡ್ ನೌಕಾನೆಲೆ ಯೋಜನೆಯಲ್ಲಿ ಸ್ಥಳೀಯ ನಿರಾಶ್ರಿತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ
ಒತ್ತಾಯಿಸಿ ಸ್ಥಳೀಯ ನಿರಾಶ್ರಿತರು, ಅಸಂಘಟಿತ ಕಾರ್ಮಿಕರು ನೌಕಾನೆಲೆಯ ವಜ್ರಕೋಶ ದ್ವಾರದ ಬಳಿ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ತೆರಳುತ್ತಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಕಳೆದ 16 ವರ್ಷಗಳಿಂದ ನೌಕಾನೆಲೆ ಯೋಜನೆಯಲ್ಲಿ ಉದ್ಯೋಗಕ್ಕಾಗಿ ಆಗ್ರಹಿಸುತ್ತ ಬರಲಾದರೂ ಉದ್ಯೋಗಾವಕಾಶಕ್ಕೆ ನಿರಾಶ್ರಿತರನ್ನು ಪರಿಗಣಿಸಲಾಗುತ್ತಿಲ್ಲ ಎಂದು ಉದ್ಯೋಗಕ್ಕಾಗಿ ಸಲ್ಲಿಸಿದ ಮನವಿಗಳ ಕಡತ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಮೀನು ಕಳೆದುಕೊಂಡು ನಿರಾಶ್ರಿತರಾದ ಕುಟುಂಬದವರಿಗೆ ಸಣ್ಣಪುಟ್ಟ ಕೆಲಸಗಳನ್ನಾದರೂ ನೀಡಿ ಎಂದು ಕೇಳಿಕೊಂಡರೂ ಅಧಿಕಾರಿಗಳು ಗಮನವೇ ನೀಡುತ್ತಿಲ್ಲ ಎಂದು ಆರೋಪಿಸಿದರು.
ಹಟ್ಟಿಕೇಶ್ವರ ಸ್ಥಳೀಯ ಸೀ ಬರ್ಡ್ ನಿರಾಶ್ರಿತರ ಕೂಲಿ ಕಾರ್ಮಿಕರ ಅಸಂಘಟಿತರ ಸಂಘದ ಅಧ್ಯಕ್ಷ ಸುನೀಲ ನಾಯ್ಕ ಹೊನ್ನಿಕೇರಿ ಮಾತನಾಡಿ ಯೋಜನಾ ನಿರಾಶ್ರಿತರಿಗೆ ಉದ್ಯೋಗ ನೀಡದೆ ಸತಾಯಿಸುವುದು ಸರಿಯಲ್ಲ ನಿರಾಶ್ರಿತರಿಗೆ ಉದ್ಯೋಗಕ್ಕೆ ಪರಿಗಣಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು.
ಇದನ್ನೂ ಓದಿ:
ಸ್ಥಳಕ್ಕೆ ಭೇಟಿ ನೀಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಸ್ಥಳೀಯ ಜನರಿಗೆ ಅದರಲ್ಲೂ ನಿರಾಶ್ರಿತ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂಬ ಬೇಡಿಕೆ ನ್ಯಾಯಯುತವಾದುದು ಹಲವಾರು ವರ್ಷಗಳಿಂದ ಬಾಕಿಯಿದ್ದ ಸೂಕ್ತ ಪರಿಹಾರ ಕೊಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದು ಉದ್ಯೋಗಾವಕಾಶದ ಬೇಡಿಕೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಕೇಂದ್ರ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ವಜ್ರಕೋಶದ ಅಧಿಕಾರಿ ವಿಕ್ರಮ ಮೆನನ್ ಪ್ರತಿಭಟನಾಕಾರರ ಜೊತೆ ಸಮಾಲೋಚನೆ ನಡೆಸಿದರು. ಹಟ್ಟಿಕೇಶ್ವರ ಸ್ಥಳೀಯ ಸೀ ಬರ್ಡ್ ನಿರಾಶ್ರಿತರ ಕೂಲಿ ಕಾರ್ಮಿಕರ ಅಸಂಘಟಿತರ ಸಂಘದ ಪದಾಧಿಕಾರಿಗಳು ಸದಸ್ಯರು, ಹಟ್ಟಿಕೇರಿ,ಅವರ್ಸಾ,ಬೆಲೇಕೇರಿ,ಬಾವಿಕೇರಿಯ ಸುತ್ತ ಮುತ್ತಲಿನ ನೌಕಾನೆಲೆ ನಿರಾಶ್ರಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



