ಹೊಸದಿಗಂತವರದಿ, ಅಂಕೋಲಾ:
ಅಯೋಧ್ಯೆ ರಾಮಮಂದಿರದ ಕುರಿತು ಪ್ರಚೋದನಕಾರಿ ಬರಹವನ್ನು ಮುಸ್ಲಿಂ ಯುವಕನೋರ್ವ ಮೊಬೈಲ್ ಸ್ಟೇಟಸಿನಲ್ಲಿ ಹಂಚಿ ಕೊಂಡಿದ್ದರಿಂದ ಆಕ್ರೋಶಗೊಂಡ ನೂರಾರು ಸಂಖ್ಯೆಯಲ್ಲಿ ಹಿಂದೂ ಸಮಾಜದವರು ಅಂಕೋಲಾ ಪೊಲೀಸ್ ಠಾಣೆ ಬಳಿ ಜಮಾಯಿಸಿ
ಆತನ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಪಟ್ಟಣದ ಹುಲಿದೇವರವಾಡದ ಯುವಕ ಜಾಫರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಸಮಾಜದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದು ಹಿಂದೂ ಸಮಾಜದ ಅಸಮಾಧಾನಕ್ಕೆ ಕಾರಣವಾಯಿತು.ಇದರಿಂದ ಆಕ್ರೋಶಗೊಂಡ 500 ಕ್ಕೂ ಅಧಿಕ ಹಿಂದೂ ಯುವಕರು ಪೊಲೀಸ್ ಠಾಣೆ ಎದುರು ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜೈ ಶ್ರೀ ರಾಮ ಎಂದು ಘೋಷಣೆ ಹಾಕುತ್ತ ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು
ಪೋಸ್ಟ್ ಹರಿಬಿಟ್ಟ ವ್ಯಕ್ತಿಯನ್ನು ಬಂಧಿಸಿದರು ಮತ್ತು ಆತನ ಮೇಲೆ ಪ್ರಕರಣ ದಾಖಲಿಸುವ ಭರವಸೆಯನ್ನು ಪೊಲೀಸರು ನೀಡಿದರು. ಇದಕ್ಕೆ ತಣಿಯದ ಪೊಲೀಸ್ ಠಾಣೆ ಬಳಿ ಸೇರಿದ್ದ ಹಿಂದೂ ಮುಖಂಡರು,ಇತ್ತೀಚಿನ ದಿನಗಳಲ್ಲಿ ಹಿಂದೂ ಸಮಾಜದ ವಿರುದ್ಧ ಅವಹೇಳನಕಾರಿ ಪೋಸ್ಟುಗಳನ್ನು ಹಾಕಿ ನೋವು ಉಂಟು ಮಾಡುವ ಘಟನೆಗಳು ಹೆಚ್ಚುತ್ತಿದ್ದು ಪೋಸ್ಟ್ ಹಾಕಿದ ಯುವಕ ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರು ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಈ ಕೃತ್ಯದಲ್ಲಿ ಇನ್ನೂ ಯಾರ ಕೈವಾಡ ಇದೆ ಎಂದು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಮುಸ್ಲಿಂ ಸಮಾಜದ ಪ್ರಮುಖರು ಬಂದು ಈ ಘಟನೆಗೂ ತಮಗೂ ಸಂಬಂಧ ಇಲ್ಲ. ಪೋಸ್ಟ್ ಹಾಕಿದ ಯುವಕನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ ಎಂದರು.
ಪೊಲೀಸರ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟ ಜನತೆ ನಂತರ ನಗರದಾದ್ಯಂತ ಮೆರವಣಿಗೆ ನಡೆಸಿದರು.
ಡಿವೈಎಸ್ಪಿ ವೆಲಂಟನ್ ಡಿಸೋಜ ಮತ್ತು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಗಳ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಹಿಂದೂ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ.