ಪಿಎಸ್‌ಐ ಮರುಪರೀಕ್ಷೆ: ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಶೇಷ ಪರೀಕ್ಷೆ ಅಸಾಧ್ಯ ಎಂದು ಹೈಕೋರ್ಟ್​​ಗೆ ತಿಳಿಸಿದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಅಕ್ರಮದಲ್ಲಿ ಭಾಗಿಯಾರುವ 35 ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ವಿಶೇಷ ಪರೀಕ್ಷೆ ನಡೆಸಲು ಸಾಧ್ಯವಿಲ್ಲವೆಂದು ಸರ್ಕಾರ ಕರ್ನಾಟಕ ಹೈಕೋರ್ಟ್ ಗೆ ಹೇಳಿದೆ. ಈ ಕುರಿತು ಹೈಕೋರ್ಟ್ ಗೆ ಬುಧವಾರ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ. ಬಳಿಕ ಹೈಕೋರ್ಟ್ ವಿಭಾಗೀಯ ಪೀಠ ಅರ್ಹತೆ ಆಧಾರದಲ್ಲಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಸೋಮವಾರ ನಡೆಸಲಾಗುವುದು ಎಂದು ಹೇಳಿದೆ.

ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮುಂಚೆ ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ಪಿಎಸ್ಐ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳ ಪೈಕಿ ಆರೋಪ ಎದುರಿಸುತ್ತಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ವಿಶೇಷ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಈ ಕುರಿತು ಸರ್ಕಾರದ ವರದಿಯನ್ನು ನ್ಯಾಯಾಲಯಕ್ಕೆ ಗೌಪ್ಯವಾಗಿ ಸಲ್ಲಿಸಲಾಗುತ್ತಿದೆ ಎಂದರು.

ಸರ್ಕಾರದ ವರದಿ ಪರಿಶೀಲಿಸಿದ ಪೀಠವು ಅರ್ಜಿಗಳನ್ನು ಅರ್ಹತೆ ಆಧಾರದಲ್ಲಿ ಜುಲೈ 10 ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆ ಮುಂದೂಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!