ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಬಂಧನಕ್ಕೆ ಪಕ್ಷವು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ. ಬುಧವಾರ ಬೆಳಗ್ಗೆ ಪಿಟಿಐ ಕಾರ್ಯಕರ್ತರು ರಸ್ತೆಗೆ ಬಂದು ಪ್ರತಿಭಟನೆಗೆ ಇಳಿದರು. ಪಿಟಿಐ ಕರೆಗೆ ಪ್ರತಿಕ್ರಿಯೆಯಾಗಿ, ಕರಾಚಿ, ಲಾಹೋರ್, ಪೇಶಾವರ್, ರಾವಲ್ಪಿಂಡಿ, ಮುಲ್ತಾನ್, ಗುಜ್ರಾವಾಲಾ, ಫೈಸಲಾಬಾದ್, ಮರ್ದಾನ್ ಮತ್ತು ಇತರ ಅನೇಕ ನಗರಗಳು ಮತ್ತು ಪಟ್ಟಣಗಳು ಬೆಂಬಲ ಘೋಷಿಸಿವೆ. ಕೆಲವೆಡೆ ಪಿಟಿಐ ಕಾರ್ಯಕರ್ತರು ಅಂಗಡಿಗಳನ್ನು ಬಲವಂತವಾಗಿ ಮುಚ್ಚಸಿದರು. ಇಮ್ರಾನ್ ಬಂಧನದ ವಿರುದ್ಧ ಮತ್ತು ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಪ್ರತಿಭಟಿಸಲು ಪಿಟಿಐ ಜನರಿಗೆ ಕರೆ ನೀಡಿತು.
ಮಂಗಳವಾರ ಇಮ್ರಾನ್ ಬಂಧನದ ನಂತರ ಪಿಟಿಐ ಉಪಾಧ್ಯಕ್ಷ ಶಾ ಮಹಮೂದ್ ಖುರೇಷಿ ತುರ್ತು ಸಭೆ ಕರೆದಿದ್ದಾರೆ. ಪಿಟಿಐ ಹಿರಿಯ ಮುಖಂಡರಾದ ಸೈಫುಲ್ಲಾ ಖಾನ್, ಅಜಂ ಸ್ವಾತಿ, ಎಜಾಜ್ ಚೈದರಿ ಅವರೊಂದಿಗೆ ಮುರಾದ್ ಸಯೀದ್, ಅಲಿ ಅಮೀನ್ ಖಾನ್ ಮತ್ತು ಹಸನ್ ನೈಜಿ ಮುಖಂಡರು ಭಾಗವಹಿಸಿದ್ದರು. ಇಮ್ರಾನ್ ಬಿಡುಗಡೆಗೆ ಸಂಬಂಧಿಸಿದಂತೆ ಪಕ್ಷದಿಂದ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಿದರು.
ಇಮ್ರಾನ್ ಖಾನ್ ಅವರನ್ನು ಬುಧವಾರ (ಇಂದು) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಲ್-ಖದೀರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ಅವರನ್ನು ಬಂಧಿಸಲಾಗಿದೆ ಎಂದು ಎನ್‌ಎಬಿ (ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ ಪಿಟಿಐ ಮುಖಂಡರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಪಂಜಾಬ್ ಪ್ರಾಂತ್ಯದ ಹಲವು ಪಿಟಿಐ ನಾಯಕರ ಮನೆಗಳ ಮೇಲೆ ದಾಳಿ ನಡೆದಿದೆಯಂತೆ. ಆದರೆ ಒಬ್ಬರನ್ನೂ ಬಂಧಿಸಿಲ್ಲ. ರಿಮಾಂಡ್‌ನಲ್ಲಿರುವ ಇಮ್ರಾನ್ ಖಾನ್ ಅವರನ್ನು ಎನ್‌ಎಬಿಯ ಮೂವರು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ, ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್‌ನಲ್ಲಿರುವ ಪೊಲೀಸ್ ಲೈನ್‌ನ ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿದೆ.