ತೆನಾಲಿಯಲ್ಲಿ ಪುನೀತ್ ರಾಜ್ ಕುಮಾರ್ ಫೈಬರ್ ಪ್ರತಿಮೆ ನಿರ್ಮಾಣ: ನ.1 ರಂದು ಕರ್ನಾಟಕದಲ್ಲಿ ಉದ್ಘಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರುನಾಡ ಯುವರತ್ನ ಕಣ್ಮರೆಯಾಗಿ ಇಂದಿಗೆ ಒಂದು ವರ್ಷ. ಆ ಕರಾಳ ದಿನ ಮತ್ತೆ ಬಂದಿದೆ. ನಟಸಾರ್ವಭೌಮನ ಸ್ಮರಣೆಯಲ್ಲಿ ತೆನಾಲಿ ಶಿಲ್ಪಿಗಳ ಕೈಯಲ್ಲಿ 21 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗಿದೆ. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಹೃದಯದ ಬಡಿತವಾಗಿ ಬೇರೂರಿದ್ದಾರೆ ಪುನೀತ್‌ ರಾಜ್‌ಕುಮಾರ್.‌ ಅವರ ಅಗಲಿಕೆ ಕನ್ನಡ ಜನತೆಗೆ ಹಾಗೂ ಚಿತ್ರರಂಗಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ. ಸಿನಿಮಾದಲ್ಲಷ್ಟೇ ಅಲ್ಲದೆ ಅನೇಕ ಸೇವಾ ಕಾರ್ಯಗಳಿಂದ ಜನರ ಮನಸಲ್ಲಿ ಅಚ್ಚಳಿಯದಂತೆ ನೆಲೆಯೂರಿದ್ದಾರೆ. ಇಂದಿನ ಪುಣ್ಯಸ್ಮರಣೆಗೆ ರಾಜ್ಯಾದ್ಯಂತ ಅಭಿಮಾನಿಗಳು ಅಪ್ಪು ನೆನಪಿಗಾಗಿ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಇಂದು ಕೂಡಾ ಕಣ್ಣೀರಿನ ಮಳೆ ಹರಿಸುತ್ತಿದ್ದಾರೆ.

ಪುನೀತ್ ಅವರ ಪ್ರಥಮ ಪುಣ್ಯತಿಥಿಯ ಸಂದರ್ಭ ಹಾಗೂ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದ ಸದಸ್ಯರಿಗೆ ಕರ್ನಾಟಕ ಸರ್ಕಾರ ʻಕರ್ನಾಟಕ ರತ್ನʼ ಪ್ರಶಸ್ತಿಯನ್ನು ನೀಡಲಿದೆ. ಅಂದು ಬೃಹತ್ ಬಹಿರಂಗ ಸಭೆ ಕೂಡ ಆಯೋಜಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಈ ಕಾರ್ಯಕ್ರಮಕ್ಕೆ ಎನ್‌ಟಿಆರ್ ಮತ್ತು ರಜನಿಕಾಂತ್ ಕೂಡ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಆಚರಣೆಯ ಅಂಗವಾಗಿ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನು ಸಹ ಅನಾವರಣಗೊಳಿಸಲಾಗುವುದು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಪುನೀತ್ ರಾಜ್‌ಕುಮಾರ್ 21 ಅಡಿ ಫೈಬರ್ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ತೆನಾಲಿಯ ಶಿಲ್ಪಿಗಳಾದ ಕ್ಯಾತೂರಿ ವೆಂಕಟೇಶ್ವರ ರಾವ್, ರವಿಚಂದ್ರ ಮತ್ತು ಶ್ರೀಹರ್ಷ ಈ ಬೃಹತ್ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ. ಈ ಪ್ರತಿಮೆಯನ್ನು 21 ಅಡಿ ಎತ್ತರದಲ್ಲಿ 3ಡಿ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಪ್ರಸ್ತುತ ಪುನೀತ್ ಫೈಬರ್ ವಿಗ್ರಹವನ್ನು ತೆನಾಲಿಯಲ್ಲಿರುವ ಸೂರ್ಯ ಶಿಲ್ಪದಲ್ಲಿ ಪ್ರದರ್ಶಿಸಲಾಗಿದೆ. ನವೆಂಬರ್ 1ರೊಳಗೆ ಪ್ರತಿಮೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!