ಪಂಜಾಬ್‌ ಸರ್ಕಾರದ ರಿಮೋಟ್‌ ಕಂಟ್ರೋಲ್ ದೆಹಲಿಯಲ್ಲಿದೆ, ವಿಪಕ್ಷಗಳ ಟೀಕಾಸ್ತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಲ್ಲದೆ, ಅರವಿಂದ್ ಕೇಜ್ರಿವಾಲ್ ಸೋಮವಾರ ರಾಜ್ಯದ ಅಧಿಕಾರಿಗಳನ್ನು ಭೇಟಿ ಮಾಡಿರುವುದು ಟೀಕೆಗೆ ಗುರಿಯಾಗಿದೆ. ದೆಹಲಿಯಿಂದಲೇ ಅರವಿಂದ್ ಕೇಜ್ರಿವಾಲ್‌ ಪಂಜಾಬ್‌ನಲ್ಲಿ ‌ʻರಿಮೋಟ್ ಕಂಟ್ರೋಲ್ʼ ಮೂಲಕ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ತೀವ್ರವಾಗಿ ಟೀಕೆ ಮಾಡಿವೆ.

ಪಂಜಾಬ್‌, ದೆಹಲಿ ಜನರ ಕೈಗೊಂಬೆಯಾಗುತ್ತಿದೆಯೇ..? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಪಂಜಾಬ್‌ನ ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ. ಕೇಜ್ರಿವಾಲ್ ನಿರೀಕ್ಷೆಗಿಂತ ಮೊದಲೇ ಪಂಜಾಬ್ ಅನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಭಗವಂತ್ ಮಾನ್ ರಬ್ಬರ್ ಸ್ಟಾಂಪ್ ಎಂಬುದು ಈಗಾಗಲೇ ತಿಳಿದಿದ್ದು, ಪಂಜಾಬ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಕೇಜ್ರಿವಾಲ್‌ ಯಾವ ಆಧಾರದ ಮೇಲೆ ಸಭೆ ನಡೆಸಿದರು ಎಂದು ಕಿಡಿ ಕಾರಿದ್ದಾರೆ.

ವಿಪಕ್ಷಗಳ ಟೀಕೆ ನಡುವೆ ಪಂಜಾಬ್ ಅಧಿಕಾರಿಗಳೊಂದಿಗೆ ಕೇಜ್ರಿವಾಲ್ ಅವರ ಸಭೆಯನ್ನು ಆಮ್ ಆದ್ಮಿ ಪಕ್ಷ ಬೆಂಬಲಿಸಿದೆ. “ಕೇಜ್ರಿವಾಲ್ ನಮ್ಮ ರಾಷ್ಟ್ರೀಯ ಸಂಚಾಲಕರು. ನಾವು ಯಾವಾಗಲೂ ಅವರ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ. ಪಂಜಾಬ್‌ನಲ್ಲಿ ಯಾವುದೇ ಬೆಳವಣಿಗೆಗೆ ಅನೌಪಚಾರಿಕ ಸಭೆ ನಡೆದರೆ ಅದನ್ನು ಪ್ರತಿಪಕ್ಷಗಳು ಟೀಕಿಸಬಾರದು ವಾಸ್ತವವಾಗಿ ಅದನ್ನು ಶ್ಲಾಘಿಸಬೇಕು. ಕೇಜ್ರಿವಾಲ್ ಅವರ ಆಡಳಿತದ ಮಾದರಿಯನ್ನು ಅರ್ಥಮಾಡಿಕೊಳ್ಳಲು ಪಂಜಾಬ್ ಮತ್ತು ಇತರ ಹಲವು ರಾಜ್ಯಗಳು ದೆಹಲಿಗೆ ಹೋಗುತ್ತವೆ” ಎಂದು ಎಎಪಿ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!