Tuesday, September 27, 2022

Latest Posts

ಗೋಸೇವೆಯ ಪುಣ್ಯಕ್ಕೆ ಸಹಕರಿಸುತ್ತಿದೆ ಕರ್ನಾಟಕ ಸರ್ಕಾರದ ಈ ಮಾದರಿ ಜಾಲತಾಣ!

 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

“ನಿಜ… ಗೋವಿನ ಬಗ್ಗೆ ನಮಗೂ ಆದರಗಳಿವೆ, ನಾವೂ ದಿನನಿತ್ಯ ಉಪಯೋಗಿಸುವ ವಸ್ತು ಹಾಲು. ಆದರೆ ನಮಗೆ ದನ ಕಟ್ಟೋಕಾಗುತ್ತ?”

“ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧವನ್ನೇನೋ ಮಾಡಿಬಿಡ್ತು. ಆದರೆ ಆಕಳುಗಳನ್ನು ಸಾಕೋರಾದರೂ ಯಾರು?”

ಇಂಥದೇ ಧಾಟಿಯ ಇನ್ನೂ ಹಲವು ಪ್ರಶ್ನೆಗಳಿದ್ದಿರಬಹುದು. ಅವಕ್ಕೆಲ್ಲ ಉತ್ತರ ಕೊಡುತ್ತಿರುವಂಥದ್ದು ಕರ್ನಾಟಕ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆ.

ಯೋಜನೆ ಅನ್ವಯ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಗೋಶಾಲೆಗಳಲ್ಲಿ ಆಶ್ರಯ ಪಡೆದಿರುವ 45,000 ಕ್ಕೂ ಹೆಚ್ಚು ಜಾನುವಾರುಗಳಿಗೆ ದಾನಿಗಳು ಆಹಾರ ಪ್ರಾಯೋಜಕತ್ವ ಒದಗಿಸಬಹುದು.

ಇದಕ್ಕಾಗಿ ಪಶುಸಂಗೋಪನಾ ಇಲಾಖೆಯು ʼಪುಣ್ಯಕೋಟಿ ದತ್ತು ವೆಬ್‌ಸೈಟ್ʼ  ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರದ ವಿಷಯಕ್ಕೆ ಬಂದರೆ ನಿರ್ದಿಷ್ಟ ಯೋಜನೆಗಳು ಮತ್ತು ಇಲಾಖೆಗಳಿಗೆ ಬೆಸೆದುಕೊಳ್ಳುವ ಡಿಜಿಟಲ್ ವೇದಿಕೆಗಳು ಕೇಂದ್ರಕ್ಕೆ ಹೋಲಿಸಿದರೆ ಕೊರತೆಯೇ. ಆದರೆ ಪುಣ್ಯಕೋಟಿ ದತ್ತು ಯೋಜನೆ ಡ್ಯಾಶ್ ಬೋರ್ಡ್ ಮಾತ್ರ ಇದಕ್ಕೆ ಅಪವಾದ.

ಇದರಲ್ಲಿ ದಾನಿಗಳು ಆಹಾರ ಅಥವಾ ದತ್ತು  ಪಡೆಯಲು ಬಯಸುವ ಗೋವುಗಳನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಗಳೆಲ್ಲದರ ಮಾಹಿತಿ ಇದ್ದು, ಆ ಗೋಶಾಲೆಯಲ್ಲಿರುವ ಹಸುಗಳ ವಿವರ, ಚಿತ್ರ ಮತ್ತು ವಿಡಿಯೊಗಳು ಹಾಗೂ ಅವರ ಸಂಪರ್ಕ ಸಂಖ್ಯೆ ಎಲ್ಲವೂ ಲಭ್ಯ. ದಾನಿಗಳು ತಮಗೆ ಇಷ್ಟವೆನಿಸಿದವರಿಗೇ ದೇಣಿಗೆಯನ್ನು ಕಳುಹಿಸುವ ವ್ಯವಸ್ಥೆ ಸಹ ಡಿಜಿಟಲ್ ವೇದಿಕೆಯಲ್ಲಿ ಮಾಡಲಾಗಿದೆ.

ಒಂದು ಹಸುವನ್ನು ದತ್ತು ಪಡೆದರೆ, ಒಬ್ಬರು ವರ್ಷಕ್ಕೆ ರೂ 11,000 ಪಾವತಿಸಬೇಕಾಗುತ್ತದೆ. ಇದಕ್ಕಿಂತ ಕಡಿಮೆ ಅವಧಿಗೆ, ಕಡಿಮೆ ಮೊತ್ತದ ದೇಣಿಗೆಗಳನ್ನು ನೀಡುವುದಕ್ಕೂ ಅವಕಾಶವಿದೆ. ಯಾವುದೇ ನಿರ್ದಿಷ್ಟ ಗೋವು ಅಥವಾ ಗೋಶಾಲೆ ಅಂತಲ್ಲದೇ ದಾನಿಗಳು ತಮಗೆ ಸಮಾಧಾನವೆನಿಸಿದ ಮೊತ್ತವೊಂದನ್ನು ಸಹ ಪಾವತಿಸಬಹುದು. ಅದನ್ನು ಎಲ್ಲ ಗೋಶಾಲೆಗಳಿಗೆ ಸಮಾನವಾಗಿ ಹಂಚುವುದಾಗಿ ಜಾಲತಾಣದಲ್ಲಿಯೇ ಸರ್ಕಾರ ಹೇಳಿದೆ. ಗೋಶಾಲೆಗಳ ದೇಣಿಗೆಯನ್ನು ಗೋಶಾಲೆಗಳ ನಿರ್ವಹಣೆ, ಶುದ್ಧ ಕುಡಿಯುವ ನೀರು ಮತ್ತು ವಿವಿಧ ಪಶುವೈದ್ಯಕೀಯ ಸೇವೆಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ.

ʼರಾಜ್ಯದಲ್ಲಿ ಹಸು, ಎಮ್ಮೆ ಸೇರಿದಂತೆ 1.14 ಕೋಟಿ ಜಾನುವಾರುಗಳಿವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರದಿಂದ ನಿರ್ವಹಿಸಲ್ಪಡುವ ಗೋಶಾಲೆಗಳಲ್ಲಿ ವಯಸ್ಸಾದ ಹಸುಗಳ ಸಂಖ್ಯೆ ಹೆಚ್ಚುತ್ತಿದೆʼ. “ಸರ್ಕಾರವು ಈ ಗೋಶಾಲೆಗಳಿಗೆ ಧನಸಹಾಯ ನೀಡುತ್ತಿದ್ದರೂ, ಪ್ರಾಣಿಗಳ ಸಂಖ್ಯೆ ದೊಡ್ಡದಿರುವುದರಿಂದ ಅವುಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಈ ಕಾರಣದಿಂದ ನಾವು ಖಾಸಗಿ ಸಹಭಾಗಿತ್ವವನ್ನು ಆರಿಸಿಕೊಳ್ಳುತ್ತಿದ್ದೇವೆ,’’ ಎಂದು ರಾಜ್ಯ ಸರ್ಕಾರ ಹೇಳುತ್ತದೆ.

ಪೋರ್ಟಲ್ ನಲ್ಲಿ ಹಸುಗಳ ವಯಸ್ಸು, ಕಸಾಯಿಖಾನೆಯಿಂದ ರಕ್ಷಿಸಲ್ಪಟ್ಟ ವಿವರ, ರೈತರು ನೀಡಿದ ಗೋಶಾಲೆಯ ಹೆಸರುಗಳು ಮತ್ತು ಸ್ಥಳಗಳು, ಲಸಿಕೆ ಮತ್ತು ತಳಿ ಸೇರಿದಂತೆ ಎಲ್ಲಾ ವಿವರಗಳಿವೆ. ದಾನಿಗಳು ಹಸುಗಳನ್ನು ಅವರ ವಯಸ್ಸು, ತಳಿ ಅಥವಾ ಸ್ಥಳದ ಪ್ರಕಾರ ಆಯ್ಕೆ ಮಾಡಬಹುದು. ದೇಣಿಗೆ ನೀಡಲು https://punyakoti.karahvs.in ಗೆ ಭೇಟಿ ನೀಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!