ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆಯ ‘ಪಂಚವಟಿ’ ಸಂಘ ಕಾರ್ಯಾಲಯ ಲೋಕಾರ್ಪಣೆ

ಹೊಸದಿಗಂತ ವರದಿ,ಪುತ್ತೂರು:

ಸಮಾಜದಲ್ಲಿ ಸಂಘ ಕಾರ್ಯ ಕೇವಲ ಕಾರ್ಯಾಲಯದಲ್ಲಿ ನಡೆಸದೆ ವಿವಿಧ ಚಟುವಟಿಕೆಗಳ ಮೂಲಕ ಸಾಮಾಜಿಕ ಪರಿವರ್ತನೆಯ ಮೂಲಕ ಜನರ ಮನಸ್ಸಿನಲ್ಲೂ ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಹೇಳಿದರು.

ಅವರು ಸೋಮವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆಯ ‘ಪಂಚವಟಿ’ ಸಂಘ ಕಾರ್ಯಾಲಯದ ಲೋಕಾರ್ಪಣೆ ಬಳಿಕ ನಗರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಕುಂದ್ ಬೌದ್ಧಿಕ್ ನೀಡಿದರು.

ಸಂಘ ಕಾರ್ಯವು ಪ್ರೇರಣೆ ಕೊಡುವ ಕುಂಡಲಿಯಂತೆ. ಅಲ್ಲಿ ನಡೆಯುವ ಬೈಠಕ್, ಚಿಂತನೆ ಆ ಪ್ರದೇಶ ಕಾರ್ಯಕರ್ತರ ಕುಂಡಲಿಯನ್ನು ಜಾಗೃತಿ ಮಾಡುತ್ತದೆ. ಆ ರೀತಿಯ ಜಾಗೃತಿಯು ಹಿಂದು ಸಮಾಜದ ಜಾಗೃತಿಯ ಸಾವಿರಾರು ಕೇಂದ್ರಗಳಾಗಿ ಮೂಡಿದೆ. ಕಳೆದ 100 ವರ್ಷದಿಂದ ಆದ ಬದಲಾವಣೆ ಇವತ್ತು ನಮ್ಮ ಕಣ್ಣ ಮುಂದಿದೆ. ಹಾಗಾಗಿ ಸಂಘ ಕಾರ್ಯವು ಕಾರ್ಯಾಲಯದಲ್ಲಿ ಅಲ್ಲ. ಹೃದಯದ ಮನಸ್ಸುಗಳಲ್ಲಿ ಸಂಘ ಇರುತ್ತದೆ ಎಂದು ಹೇಳಿದರು.

ಪ್ರಾಂತ ಸಂಘಚಾಲಕ ಡಾ. ವಾಮನ ಶೆಣೈ, ಪುತ್ತೂರು ಜಿಲ್ಲೆಯ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ಮುಖ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹಕ ಪ್ರಕಾಶ್ ಪಿ.ಎಸ್., ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಚಾರಕ್ ನಂದೀಶ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ. ಸೀತಾರಾಮ, ಹಿಂದು ಸೇವಾ ಪ್ರತಿಷ್ಠಾನದ ರಾಜ್ಯ ಸಂಚಾಲಕ ಸುಧಾಕರ್, ಅಖಿಲ ಭಾರತೀಯ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ, ವನವಾಸಿ ಕಲ್ಯಾಣ ಆಶ್ರಮದ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಶ್ರೀಪಾದ್, ಆರೋಗ್ಯ ಭಾರತಿ ಕ್ಷೇತ್ರ ಸಂಘಟನಾ ಮಂತ್ರಿ ಸದಾಶಿವ, ಪ್ರಾಂಥ ಶಾರೀರಿಕ್ ಪ್ರಮುಖ್ ಸತೀಶ್ ಕುತ್ತಾರು, ಕರ್ನಾಟಕ ಪ್ರಾಂತ ಘೋಷ್ ಪ್ರಮುಖ್ ಗಿರೀಶ್, ಪ್ರಾಂತದ ವೆಂಕಟೇಶ್ ಪಾಟಕ್, ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ, ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಸಹಿತ ಅನೇಕ ಮಂದಿ ಸ್ವಯಂ ಸೇವಕರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಕಾರ್ಯಾವಾಹ ವಿನೋದ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಪುತ್ತೂರು ಜಿಲ್ಲೆಯ ಸಹಕಾರ್ಯವಾಹ ನವೀನ್ ಕೈಕಾರ ವಂದಿಸಿದರು.

ಅತಿಥಿಗಳು ವೇದಿಕೆಗೆ ಆಗಮಿಸಿದ ತಕ್ಷಣ ಧ್ವಜಾರೋಹಣ, ಪರಿಚಯ, ಧನ್ಯವಾದ ಸಮರ್ಪಣೆ, ವೈಯಕ್ತಿಕ ಗೀತೆಯ ಬಳಿಕ ಬೌಧಿಕ್‌ ವರ್ಗ ಪ್ರಾರ್ಥನೆ, ಧ್ವಜಾವತರಣ ನಡೆಯುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!