Tuesday, October 3, 2023

Latest Posts

ಪಿವಿನ್ ಕಾಂಗ್ರೆಸ್ ಪಿಎಂ ಅಲ್ಲ, ಬಿಜೆಪಿಯ ಮೊದಲ ಪಿಎಂ: ಅಯ್ಯರ್ ಹೊಸ ಪ್ರಲಾಪ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್‌ನ ವಿವಾದಾತ್ಮಕ ನಾಯಕ ಮಣಿಶಂಕರ್ ಅಯ್ಯರ್ ಹೊಸ ವಿವಾದ ಹುಟ್ಟುಹಾಕಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಬಾರಿ ಅವರು, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರನ್ನು ‘ಕೋಮುವಾದಿ’ ಎಂದು ದೂಷಿಸಿ , ಅವರು ‘ಬಿಜೆಪಿಯ ಪ್ರಥಮ ಪ್ರಧಾನಿ’ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಗಾಂಧಿ ಕುಟುಂಬ ನಿಷ್ಠ ಕಾಂಗ್ರೆಸಿಗರು ಗಾಂಧಿ ಕುಟುಂಬಯೇತರರು ಪ್ರಧಾನಿಯಾದಲ್ಲಿ ಎಷ್ಟು ಅಸಹನೆಗೀಡಾಗುತ್ತಾರೆ ಎಂಬುದಕ್ಕೆ ಅಯ್ಯರ್ ಹೇಳಿಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಹೇಳಿದೆ.

2024ರ ಮಹಾಚುನಾವಣೆ ಹತ್ತಿರ ಬರುತ್ತಿರುವಾಗ ಗಾಂಧಿ ಕುಟುಂಬದ ‘ಮುಕುಟ್ ಮಣಿ’ಮತ್ತೊಮ್ಮೆ ಹೊಳೆಯಲಾರಂಭಿಸಿದೆ ಎಂದು ಬಿಜೆಪಿ ಬಣ್ಣಿಸಿದೆ.ನರಸಿಂಹ ರಾವ್ ಅವರು 1991-1996ರ ನಡುವಣ ಕಾಂಗ್ರೆಸ್ ನೇತೃತ್ವದ ಸರಕಾರದ ನೇತೃತ್ವ ವಹಿಸಿ ದೇಶದ 9ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ ಹಿಂದುತ್ವ ವಿರೋಧಿ ‘ಸೆಕ್ಯುಲರಿಸಂ’ನ ಪ್ರತಿಪಾದಕನಾಗಿರುವ ಮಣಿಶಂಕರ್ ಅಯ್ಯರ್ , ತನ್ನ ಪುಸ್ತಕ “ಮೆಮೊರೀಸ್ ಆಫ್ ಎ ಮಾವೇರಿಕ್-ದ ಫಸ್ಟ್ ಫಿಫ್ಟಿ ಇಯರ್ಸ್ (1941-1991)ನಲ್ಲಿ ಪಿ.ವಿ.ನರಸಿಂಹ ರಾವ್ ಅವರನ್ನು ಕೋಮುವಾದಿ ಮತ್ತು ಹಿಂದು ಕೇಂದ್ರಿತ ವ್ಯಕ್ತಿ ಎಂಬುದಾಗಿ ಗುರುತಿಸಿದ್ದಾರೆ .

1985-89ರ ಅವಯಲ್ಲಿದ್ದ ರಾಜೀವ್ ಗಾಂಧಿ ಸರಕಾರದಲ್ಲಿ ಪಿಎಂಒದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಅಯ್ಯರ್, ತಾನು ಕೈಗೊಂಡ ರಾಮ್ -ರಹೀಂ’ಯಾತ್ರೆ ವೇಳೆ ನರಸಿಂಹ ರಾವ್ ಜೊತೆಗೆ ನಡೆದ ಮಾತುಕತೆಯೊಂದನ್ನು ಬಿಚ್ಚಿಟ್ಟಿದ್ದಾರೆ. ನನ್ನ ಯಾತ್ರೆಗೆ ಆಕ್ಷೇಪ ಇಲ್ಲವೆಂದು ಹೇಳಿದ ನರಸಿಂಹ ರಾವ್ ಅವರು, ಸೆಕ್ಯುಲರಿಸಂಗೆ ನನ್ನ ವ್ಯಾಖ್ಯಾನಕ್ಕೆ ಮಾತ್ರ ಅಸಮ್ಮತಿ ವ್ಯಕ್ತಪಡಿಸಿದ್ದರು. ಸೆಕ್ಯುಲರಿಸಂಗೆ ನನ್ನ ವ್ಯಾಖ್ಯಾನದಲ್ಲಿ ಏನು ತಪ್ಪಿದೆ ಎಂದು ನಾನು ಕೇಳಿದಾಗ, ಇದೊಂದು ಹಿಂದು ದೇಶ ಎಂಬುದನ್ನು ನೀವು ಅರ್ಥ ಮಾಡಿಕೊಂಡಿಲ್ಲ ಎಂದು ತಿಳಿಸಿದರು. ಆಗ ನಾನು ನನ್ನ ಖುರ್ಚಿಯಲ್ಲಿ ಕುಳಿತು , ‘ಇದು ಬಿಜೆಪಿ ಏನು ಹೇಳುತ್ತದೆಯೋ ಅದನ್ನೇ ಪಿವಿಎನ್ ಸರಿಯಾಗಿ ಹೇಳಿದ್ದಾರೆ ’ಎಂದು ನಾನು ಹೇಳಿದೆ. ಆದ್ದರಿಂದಲೇ ,“ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಯ ಪ್ರಥಮ ಪ್ರಧಾನಿ ಅಲ್ಲ, ಬದಲಿಗೆ ಪಿವಿಎನ್ ಅವರೇ ಬಿಜೆಪಿಯ ಮೊದಲ ಪ್ರಧಾನಿ’ ಎಂದು ನಾನು ಹೇಳುತ್ತಿದ್ದೇನೆ ಎಂದಿದ್ದಾರೆ ಅಯ್ಯರ್.

ಅಯ್ಯರ್ ಈ ಹಿಂದೆ ವೀರ ಸಾವರ್ಕರ್ ಅವರು ಅಂಡಮಾನ್‌ನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ ಕಾರಾಗೃಹಕ್ಕೆ ತೆರಳಿ ಅಲ್ಲಿದ್ದ ಬರಹವನ್ನು ಅಳಿಸಲು ಯತ್ನಿಸಿ ದೇಶವಾಸಿಗಳ ಆಕ್ರೋಶಕ್ಕೆ ತುತ್ತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಐ.ಎನ್.ಡಿ.ಐ.ಎ.ಮೈತ್ರಿಕೂಟದ ಆತ್ಮವನ್ನು ಮಣಿಶಂಕರ್ ಅಯ್ಯರ್ ಲಿಖಿತವಾಗಿ ಈಗ ಪ್ರಸ್ತುತಪಡಿಸಿದ್ದಾರೆ ಎಂಬುದಾಗಿ ಬಿಜೆಪಿ ನಾಯಕ ಸಂಬೀತ್ ಪಾತ್ರ ಕುಟುಕಿದ್ದಾರೆ. ಈತ ಗಾಂಧಿ ಕುಟುಂಬದ ವಕ್ತಾರನಾಗಿದ್ದು, ಗಾಂಧಿ ಕುಟುಂಬದ ಹೊರತಾದವರು ದೇಶದ ಪ್ರಧಾನಿಯಾಗುವುದನ್ನು ಈತ ಸಹಿಸುವುದಿಲ್ಲ ಎಂಬುದು ದೃಢಪಟ್ಟಿದೆ.ಕಾಂಗ್ರೆಸ್ ಪಕ್ಷದವರೇ ಪ್ರಧಾನಿಯಾದರೂ ಅವರು ಸಹಿಸುವುದಿಲ್ಲ. ಪಿವಿಎನ್ ಬಿಜೆಪಿ ಪ್ರಧಾನಿಯೇ ಹೊರತು ಕಾಂಗ್ರೆಸಿನದಲ್ಲ ಎಂದು ಹೇಳುವ ಅವರ ಮಾತೇ ಇದಕ್ಕೆ ಸಾಕ್ಷಿ ಎಂದಿದ್ದಾರೆ.

ವಿಕೃತ ಸೆಕ್ಯುಲರಿಸಂ ಪ್ರತಿಪಾದನೆಯ ಮೂಲಕ ವಿವಾದ ಸೃಷ್ಟಿಸುತ್ತಿರುವ ಅಯ್ಯರ್, 2014ರ ಲೋಕಸಭಾ ಚುನಾವಣೆಯ ವೇಳೆ ಮೋದಿಯವರನ್ನು ಚಾಯಿವಾಲಾ ಎಂದು ಅಪಹಾಸ್ಯಗೈದು ವಿವಾದ ಸೃಷ್ಟಿಸಿದ್ದರು. ಅನಂತರ 2017ರಲ್ಲಿ ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ಷೇಪಾರ್ಹ ನಿಂದನಾತ್ಮಕ ಪದ ಬಳಸಿ , ಕಾಂಗ್ರೆಸ್ ಪಾಲಿಗೆ ದುಬಾರಿ ಸೋಲಿಗೆ ಕಾರಣವಾಗಿದ್ದರು. ಬಳಿಕ ಕಾಂಗ್ರೆಸಿನಿಂದ ಅಮಾನತುಗೊಂಡಿದ್ದರು. 2019ರ ಚುನಾವಣೆಯಲ್ಲಿ ಮತ್ತೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!