March 14, 2026
Saturday, March 14, 2026
spot_img

ಸಮಸ್ಯೆಗಳಿಗೆ ಶೀಘ್ರ ಮುಕ್ತಿ: ಜಸ್ಟ್ ಎರಡೇ ದಿನದಲ್ಲಿ ಎಲ್ ಪಿಜಿ ಹೊತ್ತು ಗುಜರಾತ್ ತಲುಪಲಿದೆ ‘ಶಿವಾಲಿಕ್’, ‘ನಂದಾ ದೇವಿ’

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಡೆಯುತ್ತಿದ್ದರೂ ಭಾರತದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಸಂಗ್ರಹದಲ್ಲಿ ಯಾವುದೇ ರೀತಿಯ ಕೊರತೆಯಿಲ್ಲ ಎಂದು ಕೇಂದ್ರ ಹಡಗು ಸಾಗಣೆ ಸಚಿವಾಲಯದ ಅಧಿಕಾರಿ ರಾಜೇಶ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ‘ಶಿವಾಲಿಕ್’, ‘ನಂದಾ ದೇವಿ’ ಹಡಗುಗಳು LPG ಹೊತ್ತು ಬರುತ್ತಿದೆ. ಶುಕ್ರವಾರ ತಡರಾತ್ರಿ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ್ದು, ಈ ಹಡಗುಗಳಲ್ಲಿ ಸುಮಾರು 92,700 ಮೆಟ್ರಿಕ್ ಟನ್ LPG ಇದ್ದು, ಮಾರ್ಚ್ 16 ಮತ್ತು ಮಾರ್ಚ್ 17ರಂದು ಗುಜರಾತ್‌ನ ಮುಂದ್ರಾ, ಕಾಂಡ್ಲಾ ಬಂದರು ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಇನ್ನೂ ಪರ್ಷಿಯನ್ ಕೊಲ್ಲಿಯಲ್ಲಿ ಭಾರತದ 24 ಹಡಗುಗಳು ಇವೆ. ಇವುಗಳಲ್ಲಿ 611 ಭಾರತೀಯ ನಾವಿಕರು ಇದ್ದು, ಎಲ್ಲರು ಸುರಕ್ಷಿತರಾಗಿದ್ದಾರೆ. ಯಾವುದೇ ರೀತಿಯ ಆತಂಕ ಬೇಡ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ, ಭಾರತದಲ್ಲಿ ಯಾವುದೇ ರೀತಿಯ ಇಂಧನ ಕೊರತೆ ಉಂಟಾಗಿಲ್ಲ. ಇಲ್ಲಿ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದೆ ಎಂದು ಹೇಳಿದ್ದಾರೆ.

ಜನರು ಯಾವುದೇ ಆತಂಕದಿಂದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ ಮಾಡುವ ಅಗತ್ಯವಿಲ್ಲ. ಜನರು ಆನ್​ಲೈನ್ ಮೂಲಕ ಸಿಲಿಂಡರ್‌ಗಳನ್ನು ಬುಕ್ ಮಾಡಬೇಕು, ಸರತಿ ಸಾಲಿನಲ್ಲಿ ನಿಲ್ಲುವುದನ್ನು ಕಡಿಮೆ ಮಾಡಿ ಎಂದರು.

ಈಗಾಗಲೇ ರಾಜ್ಯ ಸರ್ಕಾರಗಳಿಗೆ ವಾಣಿಜ್ಯ ಸಿಲಿಂಡರ್‌ಗಳನ್ನು ವಿಲೇವಾರಿ ಮಾಡಲಾಗಿದೆ. 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ವಿತರಣೆ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !