ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದು, ಹೊಸ ಸಿನಿಮಾ ಪ್ರಾರಂಭಿಸಿದ್ದಾರೆ. ಈಗಾಗಲೇ ಅದ್ದೂರಿ ಮುಹೂರ್ತ ಕೂಡ ನೆರವೇರಿದ್ದು ಚಿತ್ರೀಕರಣ ಪ್ರಾರಂಭವಾಗಿದೆ. ಮುಹೂರ್ತ ಫೋಟೋಗಳು ವೈರಲ್ ಆಗಿವೆ.
ಅಂದಹಾಗೆ ರಾಧಿಕಾ ಈ ಬಾರಿ ಬಾಲಿವುಡ್ ನಟನ ಜೊತೆ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅಜಾಗ್ರತ ಎಂದು ಟೈಟಲ್ ಇಡಲಾಗಿದೆ.
ಅಜಾಗ್ರತ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿತು. ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ರಾಧಿಕಾ ಜೊತೆ ನಾಯಕನಾಗಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಅಜಾಗ್ರತ ಸಿನಿಮಾ ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ರವಿರಾಜ್ ನಿರ್ಮಿಸುತ್ತಿದ್ದಾರೆ. ಎಂ.ಶಶಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ವಿಶೇಷ ಎಂದರೆ ಏಳು ಭಾಷೆಗಳಲ್ಲೂ ಈ ಚಿತ್ರ ಬರಲಿದ್ದು ಡಬ್ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಯಲಿದೆ ಎಂದು ಸಿನಿಮಾತಂಡ ಬಹಿರಂಗ ಪಡಿಸಿದೆ.