ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಇಂದು ತಮ್ಮ 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ ಮೂಲಕ ವಿಶೇಷವಾಗಿ ಅಭಿನಂದಿಸಿದ್ದಾರೆ. ರಾಹುಲ್ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಲಭಿಸಲಿ ಎಂದು ಪ್ರಧಾನಿ ಹಾರೈಸಿದ್ದಾರೆ.
ರಾಹುಲ್ ಗಾಂಧಿ ಶಿಕ್ಷಣ ಮತ್ತು ಆರಂಭಿಕ ಜೀವನ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಪುತ್ರನಾಗಿ 1970 ರ ಜೂನ್ 19 ರಂದು ಜನಿಸಿದ ರಾಹುಲ್, ಉನ್ನತ ಶಿಕ್ಷಣ ಪಡೆದಿದ್ದಾರೆ. ಅಮೆರಿಕದ ರೋಲಿನ್ಸ್ ಕಾಲೇಜಿನಿಂದ ಪದವಿ ಹಾಗೂ ಯುಕೆಯ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಂ.ಫಿಲ್ ಪದವಿ ಪಡೆದ ಹೆಗ್ಗಳಿಕೆ ಇವರದ್ದಾಗಿದೆ. ರಾಜಕೀಯ ಪ್ರವೇಶಿಸುವ ಮುನ್ನ ಲಂಡನ್‌ನ ಮಾನಿಟರ್ ಗ್ರೂಪ್‌ನಲ್ಲಿ ಸಲಹೆಗಾರರಾಗಿ ಮತ್ತು ಮುಂಬೈನಲ್ಲಿ ‘ಬ್ಯಾಕಾಪ್ಸ್ ಸರ್ವೀಸಸ್’ ಎಂಬ ಟೆಕ್ ಸಂಸ್ಥೆಯನ್ನು ಮುನ್ನಡೆಸಿದ್ದರು.
ರಾಜಕೀಯ ಜೀವನ ಮತ್ತು ತಿರುವು ನೀಡಿದ ಯಾತ್ರೆಗಳು
2004ರಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ರಾಹುಲ್, 2017ರಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು. ಇತ್ತೀಚಿನ ವರ್ಷಗಳಲ್ಲಿ ಅವರು ಕೈಗೊಂಡ “ಭಾರತ್ ಜೋಡೋ ಯಾತ್ರೆ” ಮತ್ತು “ಭಾರತ್ ಜೋಡೋ ನ್ಯಾಯ ಯಾತ್ರೆ”ಗಳು ದೇಶಾದ್ಯಂತ ಭಾರಿ ಜನಸಂಪರ್ಕ ಬೆಳೆಸಲು ನೆರವಾದವು. ಈ ಯಾತ್ರೆಗಳು ಅವರ ರಾಜಕೀಯ ಜೀವನಕ್ಕೆ ಬಹುದೊಡ್ಡ ಮೈಲಿಗಲ್ಲಾಗಿ ಮತ್ತು ಹೊಸ ತಿರುವು ನೀಡುವಲ್ಲಿ ಯಶಸ್ವಿಯಾಗಿವೆ.



