ಮಾ. 31 – ಏ. 1ಕ್ಕೆ ಕರ್ನಾಟಕ ಪ್ರವಾಸ ಮಾಡ್ತಾರೆ ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಶ್ರೀಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮ ನಿಮಿತ್ತ ಮಾ. 31ರಂದು ಮಧ್ಯಾಹ್ನ 3.30ಕ್ಕೆ ತುಮಕೂರು ಶ್ರೀಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅವರ ಗದ್ದುಗೆಗೆ ಪೂಜೆ, ಗೌರವ ಸಲ್ಲಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಿ, ಅಲ್ಲಿಯೇ ಪ್ರಸಾದ ಸ್ವೀಕರಿಸುತ್ತಾರೆ. ನಂತರ ಬೆಂಗಳೂರಿಗೆ ಬಂದು ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ, ಬಿಬಿಎಂಪಿ ವ್ಯಾಪ್ತಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ನಂತರ ಏಪ್ರಿಲ್ 1ರಂದು ಎಲ್ಲ ಶಾಸಕರು, ಮಾಜಿ ಶಾಸಕರು, 2018ರ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಂಸತ್ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಮಾಜಿ ಸಂಸದರು, ವಿವಿಧ ಘಟಕಗಳ ಅಧ್ಯಕ್ಷರ ಜೊತೆ ಸಭೆ ಮಾಡಲಿದ್ದಾರೆ ಎಂದರು.

ಪಕ್ಷ ಸಂಘಟನೆ ಚುರುಕು
ರಾಜ್ಯದಲ್ಲಿ ಈಗಾಗಲೇ 47 ಲಕ್ಷ ಕಾಂಗ್ರೆಸ್ ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಇಡೀ ದೇಶದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಇನ್ನು ತಾಂತ್ರಿಕ ಕಾರಣದಿಂದ ಪ್ರಾವಿಷನ್ ಆಗಿರುವ ಸದಸ್ಯತ್ವ ಬೇರೆ ಇದೆ. ಮಾ. 31ರಂದು ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜೂಮ್ ಮೂಲಕ ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಸಕ್ರಿಯವಾಗಿರುವವರ ಜೊತೆ ಸಂಪರ್ಕ ಮಾಡಲಾಗುವುದು. ಸದಸ್ಯತ್ವ ನೋಂದಣಿ ಅವಧಿ ವಿಸ್ತರಣೆ ಮಾಡಬೇಕು ಎಂದು ಕೆಲವರು ಮನವಿ ಮಾಡಿದ್ದು, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದರು.

ಬ್ಲಾಕ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಪಕ್ಷದ ವಿವಿಧ ಚುನಾವಣೆಗಳು ತೀರ್ಮಾನ ಆಗಿದ್ದರಿಂದ ನಾವು ತರಾತುರಿಯಲ್ಲಿ ಸದಸ್ಯತ್ವ ಮಾಡಿದ್ದೇವೆ. ಎಲ್ಲವೂ ನೈಜ ಸದಸ್ಯತ್ವವಾಗಿವೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಜೊತೆ ಮಾತನಾಡಬೇಕು ಎಂದು ರಾಹುಲ್ ಗಾಂಧಿ ಅವರು ಬಯಸಿದ್ದಾರೆ. ಇನ್ನು ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್‌ಎಸ್ಯೂಐ, ಸೇವಾದಳ ಹಾಗೂ ಮುಂಚೂಣಿ ಘಟಕಗಳ ಮುಖ್ಯಸ್ಥರ ಜೊತೆ ಪ್ರತ್ಯೇಕ ಸಭೆ ಮಾಡಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!