Sunday, June 4, 2023

Latest Posts

ರಾಹುಲ್‌ ಗಾಂಧಿ ಕೋಲಾರ ಭೇಟಿ ಮತ್ತೆ ಮುಂದೂಡಿಕೆ! – ಗೊಂದಲದಲ್ಲಿದೆಯಾ ಕರ್ನಾಟಕ ಕಾಂಗ್ರೆಸ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ʼಮೋದಿʼ ಸಮುದಾಯದ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆಗಳಿಂದಾಗಿ ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿ ಇತ್ತೀಚೆಗಷ್ಟೇ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಕೋಲಾರ ಭೇಟಿ ಇದೀಗ ಮುಂದೂಡಲ್ಪಟ್ಟಿದೆ. ಏಪ್ರಿಲ್‌ 10 ರಂದು ಕೋಲಾರದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರಲ್ಲಿ ರಾಹುಲ್‌ ಗಾಂಧಿ ಭಾಗವಹಿಸಬೇಕಿತ್ತು. ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಇದು ಅವರ ಮೊದಲ ಸಾರ್ವಜನಿಕ ಕಾರ್ಯಕ್ರಮ ಎಂದೆನಿಸಿಕೊಂಡಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಹುಲ್‌ ಗಾಂಧಿಯವರು ದೇಶಾದ್ಯಂತ ಸತ್ಯಮೇವ ಜಯತೇ ಆಂದೋಲನಕ್ಕೆ ಚಾಲನೆ ನೀಡಬೇಕಿತ್ತು. ಈ ಹಿಂದೆಯೂ ಹಲವಾರು ಬಾರಿ ಈ ಕಾರ್ಯಕ್ರಮ ಮುಂದೂಡಲ್ಪಟ್ಟು ಕೊನೆಗೆ ಏಪ್ರಿಲ್‌ 10 ರಂದು ದಿನಾಂಕ ನಿಗದಿಯಾಗಿತ್ತು. ಆದರೆ ಇದೀಗ ಆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಕಾರ್ಯಕ್ರಮ ಮುಂಡೂಡಲು ಕಾರಣವೇನು ಎಂಬುದನ್ನು ಕೈ ಪಾಳಯ ತಿಳಿಸಿಲ್ಲ. ಕಾರ್ಯಕ್ರಮದ ಕುರಿತಾಗಿ ಶುಕ್ರವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಕೋಲಾರ ಮುಖಂಡರ ಸಭೆ ನಡೆಸಿದ್ದು ಮುಂದೂಡುವ ಕುರಿತು ಚರ್ಚೆ ನಡೆಸಿದ್ದಾರೆ. ಸದ್ಯಕ್ಕೆ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು ಮುಂದೆ ಯಾವಾಗ ನಡೆಯಲಿದೆ ಎಂಬುದಿನ್ನೂ ನಿರ್ಧಾರವಾದಂತಿಲ್ಲ.

2019ರಲ್ಲಿ ಇದೇ ಕೋಲಾರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್‌ ಗಾಂಧಿ ಭಾಷಣ ಮಾಡಿದ್ದರು. ಆ ಸಂದರ್ಭದಲ್ಲಿ ಆಡಿದ್ದ ಮಾತುಗಳು ಅವರಿಗೆ ಮುಳುವಾಗಿ ಪರಿಣಮಿಸಿತ್ತು. ಹೀಗಾಗಿ ಅನರ್ಹಗೊಂಡಿರೋ ಸಂಸದ ರಾಹುಲ್‌ ಗಾಂಧಿ ಅದೇ ಕೋಲಾರದಲ್ಲಿ ಮತ್ತೊಮ್ಮೆ ಮಾತನಾಡುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ಕಾಂಗ್ರೆಸ್‌ ಯೋಚಿಸಿತ್ತು. ಆದರೀಗ ಕಾರ್ಯಕ್ರಮ ಮುಂದೂಡಲ್ಪಟ್ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಹಿಂದೆ ಕೋಲಾರದಲ್ಲಿ ಮಾಡಿದ ಭಾಷಣದಿಂದಲೇ ವಿವಾದ ಶುರುವಾಗಿ ನಂತರ ಅದು ಕೋರ್ಟ್ ತೀರ್ಪು ಮತ್ತು ಅನರ್ಹತೆವರೆಗೆ ಹೋಗಿದ್ದರಿಂದ ಮತ್ತೊಮ್ಮೆ ಆ ಬಗೆಯ ವಿವಾದಗಳು ಬೇಡ ಎಂದು ಕರ್ನಾಟಕ ಕಾಂಗ್ರೆಸ್ ಯೋಚಿಸುತ್ತಿದೆಯೇ? ರಾಹುಲ್ ಗಾಂಧಿ ತಮ್ಮ ಭಾಷಣಗಳಲ್ಲಿ ಮೋದಿ-ಅದಾನಿ ಪ್ರಸ್ತಾಪ ಅತಿಯಾಗಿ ಮಾಡಿ, ಪ್ರಸ್ತುತ ಕರ್ನಾಟಕ ವಿಧಾನಸಭೆ ಚುನಾವಣೆ ಮೋದಿ ವರ್ಸಸ್ ರಾಹುಲ್ ಗಾಂಧಿ ಎಂದಾಗುವುದು ಬೇಡ ಅಂತ ಕರ್ನಾಟಕ ಕಾಂಗ್ರೆಸ್ ಯೋಚಿಸುತ್ತಿದೆಯೇ? ಅಥವಾ ಕೋಲಾರದಲ್ಲಿ ಅಭ್ಯರ್ಥಿ ಘೋಷಣೆಯಾದ ನಂತರ ರಾಹುಲ್ ಗಾಂಧಿ ಬರಲಿ ಎಂದು ಅಪೇಕ್ಷಿಸುತ್ತಿದೆಯೇ ಎಂಬೆಲ್ಲ ಪ್ರಶ್ನೆಗಳು ಹುಟ್ಟಿವೆ.
ಕಾಂಗ್ರೆಸ್ಸಿನಲ್ಲಿ ಈ ಎಲ್ಲ ಗೊಂದಲಗಳು ಕಾಣುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಮಾತ್ರ ಭಾನುವಾರ ಮತ್ತೊಮ್ಮೆ ಕರ್ನಾಟಕದಲ್ಲಿರಲಿದ್ದಾರೆಂಬುದು ಗಮನಾರ್ಹ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!