ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ 1 ಲಕ್ಷ ಎಂದ ರಾಹುಲ್ ಗಾಂಧಿ: ಪೋಸ್ಟ್ ಆಫೀಸ್ ಮುಂದೆ ಮಹಿಳೆಯರ ಕ್ಯೂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ (women) ಖಾತೆಗೆ ʼಟಕಾ ಟಕ್ ಹಣʼ ಜಮಾವಣೆ ಮಾಡಲಾಗುವುದು ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಘೋಷಣೆ ಪರಿಣಾಮ, ಪೋಸ್ಟ್‌ ಆಫೀಸ್‌ಗಳಲ್ಲಿ (Post Office) ಖಾತೆ ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ.

ಚುನಾವಣೆ ಪ್ರಚಾರದಲ್ಲಿ ಇಂಡಿಯಾ ಒಕ್ಕೂಟ, ಅಧಿಕಾರ ಬಂದ ಕೂಡಲೇ ಸರ್ಕಾರ ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಪ್ರತಿ ತಿಂಗಳು 8500 ರೂ. ಹಣ ಬರಲಿದೆ ಎಂಬ ನಿರೀಕ್ಷೆಯಲ್ಲಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

ಕಳೆದ 15 ದಿನದಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬೀಳುತ್ತಿರುವುದು ಕಂಡುಬಂದಿದೆ. ಮಹಿಳೆಯರ ನಿಯಂತ್ರಣ ಮಾಡಲಾರದೆ ಬೆಂಗಳೂರಿನ ಅಂಚೆ ಕೇಂದ್ರ ಕಚೇರಿಯ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.

ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಕಚೇರಿ ಮುಂದೆ ಮುಗಿಬೀಳುತ್ತಿರುವ ಸುತ್ತಮುತ್ತಲಿನ ಶಿವಾಜಿನಗರ, ವಸಂತನಗರ ಮುಂತಾದೆಡೆಗಳ ಮಹಿಳೆಯರು, ಅವರ ಜೊತೆಗೆ ಬರುತ್ತಿರುವ ಪುರುಷರು ಅಂಚೆ ಕಚೇರಿ ಆವರಣವನ್ನು ಅಕ್ಷರಶಃ ಸಂತೆಯಾಗಿಸಿದ್ದಾರೆ.
ಮಹಿಳೆಯರ ನಿಯಂತ್ರಣ ಸಾಧ್ಯವಾಗದೆ ಅಂಚೆ ಸಿಬ್ಬಂದಿ ಟೋಕ‌ನ್ ವಿತರಿಸಲು ಆರಂಭಿಸಿದ್ದಾರೆ. ಬೆಳಗ್ಗೆ 4 ಗಂಟೆಗೆ ಟೋಕನ್ ವಿತರಣೆ ಆರಂಭವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕ್ಯೂ ನಿಂತು ಮಹಿಳೆಯರು ಟೋಕನ್ ಪಡೆಯುತ್ತಿದ್ದಾರೆ.

ಖಚಿತ ಮಾಹಿತಿ ಇಲ್ಲ:
ಅಕೌಂಟ್‌ಗೆ ಹಣ ಬರುತ್ತೆ ಅಂತ ಅಕ್ಕಪಕ್ಕದವರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹಣ ನೀಡುತ್ತಾರಂತೆ. ಮೋದಿ ಬಂದ್ರೆ 2 ಸಾವಿರ ನೀಡುತ್ತಾರಂತೆ. ಯಾರು ಬಂದ್ರೇನು ನಮಗೆ ಹಣ ಬರುತ್ತೆ ಅಂತ ಹೇಳಿದ್ರು. ಅದಕ್ಕೆ ಬಂದಿದ್ದೇವೆ. ಬೆಳಗ್ಗೆ 5 ಗಂಟೆಗೆ ಬಂದಿದ್ದೇವೆ. ಯಾವ ಅಧಿಕಾರಿಗಳೂ ಹೇಳಿಲ್ಲ, ನೆರೆಮನೆಯವರು, ಸ್ಥಳೀಯರು ಹೇಳಿದರುಎಂಬುದು ಖಾತೆಗಾಗಿ ಕ್ಯೂ ನಿಂತ ಮಹಿಳೆಯರ ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!