ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ರಾಹುಲ್ ಗಾಂಧಿ ಭಾರತ ವಿರೋಧಿ ಪ್ರತ್ಯೇಕತಾವಾದಿ ಗುಂಪಿನ ನಾಯಕರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್, ‘ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಭಾರತ ವಿರೋಧಿ ಪ್ರತ್ಯೇಕತಾವಾದಿ ಗುಂಪಿನ ನಾಯಕನಾಗುವತ್ತ ಸಾಗುತ್ತಿದ್ದಾರೆ’. ‘ಭಾರತದ ಏಕತೆ, ಸಮಗ್ರತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ನಾಶಪಡಿಸುವುದು ಮತ್ತು ದೇಶವನ್ನು ಅಂತರ್ಯುದ್ಧದತ್ತ ತಳ್ಳುವುದು ರಾಹುಲ್ ಗಾಂಧಿ ಅವರ ಏಕೈಕ ಗುರಿಯಾಗಿದೆ’ ಎಂದಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?:
ಸಿಖ್ ಸಮುದಾಯ, ಮೀಸಲು ಮತ್ತು ಚೀನಾದ ಕುರಿತು ರಾಹುಲ್ ಗಾಂಧಿಯವರು ತಮ್ಮ ಅಮೇರಿಕಾ ಭೇಟಿಯ ಸಂದರ್ಭದಲ್ಲಿ ನೀಡಿದ ಇತ್ತೀಚಿನ ಹೇಳಿಕೆಗಳ ಕುರಿತು ರಾಜಕೀಯ ಕಲಹ ಹೆಚ್ಚುತ್ತಿದೆ. ಸೋಮವಾರ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನೂರಾರು ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಕೆಲವು ಧರ್ಮಗಳು, ಭಾಷೆಗಳು ಮತ್ತು ಸಮುದಾಯಗಳನ್ನು ಇತರರಿಗಿಂತ ಕೀಳು ಎಂದು ಪರಿಗಣಿಸುತ್ತಿದೆ ಎಂದು ಆರೋಪಿಸಿದ್ದರು. ಭಾರತದಲ್ಲಿ ಕಾಂಗ್ರೆಸ್ನ ಹೋರಾಟವು ಇದರ ಬಗ್ಗೆಯೇ ಹೊರತು ರಾಜಕೀಯದ ಬಗ್ಗೆ ಅಲ್ಲ ಎಂದು ಹೇಳಿದ್ದರು.