ಹೊಸದಿಗಂತ ವರದಿ, ಬಳ್ಳಾರಿ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಶುಕ್ರವಾರ ಸಂಜೆ ಬಳ್ಳಾರಿ ತಲುಪಿದ್ದು, ಶನಿವಾರ ಬೆಳಿಗ್ಗೆ 6.30ಕ್ಕೆ ಬಳ್ಳಾರಿ ಹೊರವಲಯದ ಹಲಕುಂದಿ ಶ್ರೀಮಠದಿಂದ ಪಾದಯಾತ್ರೆ ಮುಂದುವರೆಯಿತು.
ಬಳ್ಳಾರಿಯ ಬೆಂಗಳೂರು ರಸ್ತೆ ಮೂಲಕ ಮೊತಿ ವೃತ್ತ, ರಾಯಲ್ ವೃತ್ತದ ಮೂಲಕ ಜಿಲ್ಲಾ ನ್ಯಾಯಲಯದ ಮಾರ್ಗವಾಗಿ ಕಮ್ಮಾ ಭವನ ತಲುಪಿತು. ಸುಮಾರು 9 ಕಿ.ಮೀ.ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ ಕಮ್ಮಾ ಭವನದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದು, ಮ.1ಕ್ಕೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ ಸಾರ್ವಜನಿಕ ಬೃಹತ್ ಸಮಾವೇಶದ ಮುಖ್ಯ ವೇದಿಕೆಗೆ ಆಗಮಿಸಿದರು.
ಹಲಕುಂದಿ ಮಠದಿಂದ ಪ್ರಾರಂಭಗೊಂಡ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಸಾಥ್ ನೀಡಿ ಗಮನಸೆಳೆದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿಯ ಸುರ್ಜೆವಾಲ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಅನೇಕ ಗಣ್ಯರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು.
ರಾಹುಲ್ ಗಾಂಧಿಗೆ ಭವ್ಯ ಸ್ವಾಗತ:
ಭಾರತ್ ಜೋಡೋ ಪಾದಯಾತ್ರೆ ಬಳ್ಳಾರಿ ನಗರ ಪ್ರವೇಶಿಸುತ್ತಿದ್ದಂತೆ ರಸ್ತೆ ಮೆಲೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ರಾಹುಲ್ ಗಾಂಧಿ ಅವರಿಗೆ ಬೆಳ್ಳ ಬೆಳ್ಳಂ ಬೆಳಿಗ್ಗೆ ಭವ್ಯ ಸ್ವಾಗತ ನೀಡಿದರು. ರಾಹುಲ್ ಗಾಂಧಿ ಅವರು ಮಹಿಳೆಯರು ಬಿಡಿಸಿದ ರಂಗೋಲಿಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ