ರಾಹುಲ್‌ಗೆ ಈಗ್ಲೂ ಅಮ್ಮ ಕೇಳ್ತಾರಂತೆ ಪಟ್ಟಾಗಿ ಕೂತು ಓದಿ ಡಿಗ್ರಿ ಕಂಪ್ಲೀಟ್ ಮಾಡೋಕೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಂಗ್ಯಾಕೆ ಪಟ್ಟುಹಿಡಿದು ಕೂತು ಓದಬಾರದು? ಬಾಕಿ ಇರುವ 30 ಸಬ್ಜೆಕ್ಟ್ ಓದಿ ಮುಗಿಸಲು ಏನು ಕಷ್ಟ? ಫೇಲ್ ಆಗಿರುವ ಸಬ್ಜೆಕ್ಟ್  ಶ್ರಮಪಟ್ಟು ಕಲಿತು ಪದವಿ ಮುಗಿಸಬಹುದಲ್ಲ?
ಹೆತ್ತವರು ಕೇಳುವ ಈ ಪ್ರಶ್ನೆಗಳು ಟೀಮ್ ಇಂಡಿಯಾ ಉಪನಾಯಕ, ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ತಂಡದ ನಾಯಕ ಕೆ.ಎಲ್. ರಾಹುಲ್‌ರನ್ನೂ ಬಿಟ್ಟಿಲ್ಲ!
ಎಸ್, ತನ್ನ ಅಮ್ಮನಿಗಿರುವ ಭವಿಷ್ಯದ ಕಾಳಜಿಯ ಬಗ್ಗೆ ‘ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ಸ್ ’ ಎಂಬ ಚಾಟ್ ಶೋನಲ್ಲಿ ಹಂಚಿಕೊಂಡಿದ್ದಾರೆ ರಾಹುಲ್.
ನನ್ನ ತಾಯಿ ಈಗಲೂ ನೀನು ಪದವಿ ಪೂರೈಸಿಲ್ಲ ಎಂದು ಬೈಯ್ಯುತ್ತಾರೆ.
ನಾನು ಟೀಮ್ ಇಂಡಿಯಾಗೆ ಕಾಲಿಟ್ಟಾಗ ಅಪ್ಪ, ಅಮ್ಮ ಹೆಚ್ಚೇನೂ ಖುಷಿ ಪಟ್ಟಿರಲಿಲ್ಲ. ನಾಲ್ಕು ವರ್ಷ ಕ್ರಿಕೆಟ್ ಆಡಿ ಹೆಸರು ಮಾಡಿದ ಮೇಲೆ ನನಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಉದ್ಯೋಗ ಸಿಕ್ಕಿತು. ನನಗೆ ಕೇಂದ್ರ ಸರ್ಕಾರದ ನೌಕರಿ ಸಿಕ್ಕಿದ್ದಾಗ ಮಾತ್ರ ಅವರು ಬಹಳ, ಬಹಳ ಖುಷಿಪಟ್ಟಿದ್ದರು. ಇದಕ್ಕೆ ಕಾರಣ ಅವರು ಕ್ರೀಡಾ ದ್ವೇಷಿಗಳು ಅಗಿದ್ದರು ಅಂತಲ್ಲ, ಅವರಿಗೆ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇತ್ತು ಅಂತ.
ತಂದೆ, ತಾಯಿ ವೃತ್ತಿಯಲ್ಲಿ ಪ್ರೊಫೆಸರ್. ನಮ್ಮ ಕುಟುಂಬದಲ್ಲಿ ಯಾರನ್ನೇ ನೋಡಿದರೂ ಒಂದೋ ವೈದ್ಯರಾಗಿರುತ್ತಾರೆ ಇಲ್ಲವೇ ಎಂಜಿನಿಯರ್. ಅಥವಾ ಇನ್ನೇನೋ ದೊಡ್ಡ ಉದ್ಯೋಗದಲ್ಲಿರುತ್ತಾರೆ. ನಾನೂ ಕೂಡ 10ನೇ ತರಗತಿಯವರೆಗೆ ಉತ್ತಮ ವಿದ್ಯಾರ್ಥಿಯೇ ಆಗಿದ್ದೆ. ಬಳಿಕ ಮುಂದಿನ ಶಿಕ್ಷಣಕ್ಕೆ ವಿಜ್ಞಾನವೋ, ವಾಣಿಜ್ಯವೋ ಎಂಬ ಗೊಂದಲ ಶುರುವಾಗಿತ್ತು. ನಾನು ಮಾತ್ರ ವಿಜ್ಞಾನ ತೆಗೆದುಕೊಂಡು, ಅದರ ಜೊತೆಗೇ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಅವರದನ್ನು ಅರ್ಥ ಮಾಡಿಕೊಂಡರು. ಈಗ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇನೆ. ಆದರೂ ಅಮ್ಮ ಈಗಲೂ ಕೇಳುತ್ತಿರುತ್ತಾರೆ… ಶ್ರಮಪಟ್ಟು ಕಲಿತು ಪದವಿ ಮುಗಿಸಬಹುದಲ್ಲ?
ಹೀಗೆನ್ನುತ್ತಾ ಮುಗುಳ್ನಗುತ್ತಾರೆ ರಾಹುಲ್!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!