April 29, 2026
Wednesday, April 29, 2026
spot_img

ದಾಖಲೆ ಬರೆದ ರಾಯಚೂರು ಮದ್ಯ ಮಾರಾಟ: ಒಂದೇ ತಿಂಗಳಲ್ಲಿ 13 ಸಾವಿರ ಅಧಿಕ ಬಿಯರ್ ಬಾಕ್ಸ್ ಖಾಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಸಿಲನಾಡು ರಾಯಚೂರಿನಲ್ಲಿ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಈ ಕಡು ಬೇಸಿಗೆಯಿಂದ ತಪ್ಪಿಸಿಕೊಳ್ಳಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದರೆ, ಇತ್ತ ಮದ್ಯಪ್ರಿಯರು ಮಾತ್ರ ಬಿಯರ್ ಮೊರೆ ಹೋಗಿದ್ದಾರೆ. ಪರಿಣಾಮವಾಗಿ, ಜಿಲ್ಲೆಯಲ್ಲಿ ಬಿಯರ್ ಮತ್ತು ಲಿಕ್ಕರ್ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಿದೆ.

ರಾಯಚೂರಿನ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ಅಂಕಿಅಂಶಗಳ ಪ್ರಕಾರ, ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಮದ್ಯದ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಮಾರ್ಚ್‌ನಲ್ಲಿ ಒಟ್ಟು 82,151 ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಏಪ್ರಿಲ್ ತಿಂಗಳ ಕೇವಲ 25 ದಿನಗಳ ಅವಧಿಯಲ್ಲೇ 95,319 ಬಾಕ್ಸ್ ಬಿಯರ್ ಪೂರೈಕೆಯಾಗಿದೆ. ಅಂದರೆ, ಕೇವಲ ಒಂದು ತಿಂಗಳ ಅಂತರದಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ಅಧಿಕ ಬಾಕ್ಸ್ ಬಿಯರ್ ಮಾರಾಟವಾಗಿರುವುದು ವಿಶೇಷ.

ಬಿಯರ್ ಮಾತ್ರವಲ್ಲದೆ, ಇಂಡಿಯನ್ ಮೇಡ್ ಲಿಕ್ಕರ್ ಮಾರಾಟವೂ ಹಿಂದೆ ಬಿದ್ದಿಲ್ಲ. ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ಬಾರಿ 8 ಸಾವಿರ ಬಾಕ್ಸ್ ಹೆಚ್ಚು ಲಿಕ್ಕರ್ ಮಾರಾಟವಾಗಿದೆ. ಇನ್ನೂ ಅಚ್ಚರಿಯ ವಿಷಯವೆಂದರೆ, ಇದೇ ವರ್ಷದ ಮಾರ್ಚ್ ತಿಂಗಳಿಗಿಂತ ಏಪ್ರಿಲ್‌ನಲ್ಲಿ ಬರೋಬ್ಬರಿ 16 ಸಾವಿರ ಬಾಕ್ಸ್ ಹೆಚ್ಚುವರಿ ಲಿಕ್ಕರ್ ಮಾರಾಟ ಕಂಡುಬಂದಿದೆ.

ಬೇಡಿಕೆ ಹೆಚ್ಚಾದಂತೆ ಕೆಎಸ್‌ಬಿಸಿಎಲ್ ಗೋದಾಮುಗಳಲ್ಲಿ ಸ್ಟಾಕ್ ವೇಗವಾಗಿ ಖಾಲಿಯಾಗುತ್ತಿದೆ. ಕಳೆದ ವರ್ಷದ ಏಪ್ರಿಲ್‌ಗಿಂತ ಈ ವರ್ಷ ಹತ್ತು ಸಾವಿರಕ್ಕೂ ಅಧಿಕ ಬಿಯರ್ ಬಾಕ್ಸ್‌ಗಳು ಮಾರಾಟವಾಗಿದ್ದು, ಸರ್ಕಾರಕ್ಕೆ ಭರ್ಜರಿ ಆದಾಯ ಹರಿದುಬರುತ್ತಿದೆ. ಒಟ್ಟಿನಲ್ಲಿ ರಾಯಚೂರಿನ ಬಿಸಿಲು ಮದ್ಯದ ಅಂಗಡಿಗಳ ಪಾಲಿಗೆ ಸುಗ್ಗಿ ಕಾಲವಾಗಿ ಪರಿಣಮಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !