ಹೊಸದಿಗಂತ ವರದಿ, ವಿಜಯಪುರ:
ಜಿಲ್ಲೆಯಲ್ಲಿ ನಕಲಿ ಮದ್ಯ ತಯಾರಿಸುತ್ತಿದ್ದ ಘಟಕದ ಮೇಲೆ ಅಬಕಾರಿ ಪೊಲೀಸರು ಶನಿವಾರ ದಾಳಿ ನಡೆಸಿ, 8. 50 ಲಕ್ಷ ರೂ.ಗಳ ಮೌಲ್ಯದ ಮದ್ಯ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿ, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿ ರಸ್ತೆಯ ಲೋಯೊಲಾ ಆಂಗ್ಲ ಶಾಲೆ ಹಿಂಭಾಗದ ಅಮೋಘಸಿದ್ದ ಬಸಪ್ಪ ಹೂಗಾರ ಎಂಬವನ ಜಮೀನಿನ ಶೆಡ್‌ನಲ್ಲಿ, 8. 50 ಲಕ್ಷ ರೂ.ಗಳ ಮೌಲ್ಯದ, 561.600 ಲೀಟರ್ ನಕಲಿ ಮದ್ಯ ಹಾಗೂ 140 ಲೀಟರ್ ಮದ್ಯಸಾರವನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳಾದ ಸಿಂದಗಿಯ ಅಮೋಘಸಿದ್ದ ಬಸಪ್ಪ ಹೂಗಾರ (35), ಹುಬ್ಬಳ್ಳಿಯ ಅಕ್ಷಯ ಮಹಾದೇವಪ್ಪ ಜಾಧವ (27), ಅಭಿಷೇಕ ಲಕ್ಷ್ಮಣರಾವ ಜಾಧವ (25), ನಾಗರಾಜ ಕೃಷ್ಣಸಾ ಬೋಜಗೇರಿ (42), ವಿನಾಯಕ ಪ್ರಕಾಶ ಕಲಾಲ (25), ಕೃಷ್ಣಾ ಲಕ್ಷ್ಮಣಸಾ ಬಾಂಡಗೆ (54) ಬಂಧಿತ ಆರೋಪಿಗಳು.
ಬೆಳಗಾವಿ ವಿಭಾಗದ ಅಬಕಾರಿ ಅಪರ ಆಯುಕ್ತರು, ಅಬಕಾರಿ ಜಂಟಿ ಆಯುಕ್ತ, ಅಬಕಾರಿ ಉಪ ಆಯಕ್ತರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ, ರಾಹುಲ್ ನಾಯಕ, ಸಿಂದಗಿ ಅಬಕಾರಿ ನಿರೀಕ್ಷಕ ಶಿವಾನಂದ ಹೂಗಾರ, ಎಂ.ಡಿ. ಕಬಾಡೆ, ಉಪ ನಿರೀಕ್ಷಕ ಬಿ.ಎಸ್. ನಾಗಠಾಣ, ಆಶ್ರಿತ, ಫರೀನಾ, ಪತ್ತಾರ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ.
ಈ ಸಂಬಂಧ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.