ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ರೈಲ್ವೆ ಮಾರ್ಗ: ಕೇರಳ ಸಿಎಂ ಪ್ರಸ್ತಾಪವನ್ನು ತಿರಸ್ಕರಿಸಿದ ಸಿಎಂ ಬೊಮ್ಮಾಯಿ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳ ಸಿಎಂ ಪಿಣರಾಯಿ ವಿಜಯನ್ ತಂದಿದ್ದ ನಾಗರಹೊಳೆ, ಬಂಡೀಪುರ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಬರುವ ಎರಡು ರೈಲ್ವೆ ಮಾರ್ಗಗಳ ನಿರ್ಮಾಣ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸ್ಪಷ್ಟವಾಗಿ ತಿರಸ್ಕಾರ ಮಾಡಿದ್ದಾರೆ.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಕೇರಳ ಸಿಎಂ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ‌, ಕೇರಳದ ಸಿಎಂ ಪಿಣರಾಯಿ ವಿಜಯನ್ ಬಂದಿದ್ರು. ಎರಡ್ಮೂರು ವಿಚಾರಗಳನ್ನು ಚರ್ಚೆ ಮಾಡಿದ್ರು. ಕನ್ಯೂರು ರೈಲ್ವೆ ಲೈನ್​​ ವಿಚಾರವಾಗಿ ಚರ್ಚೆ ನಡೆಸಿದರು. ನಮ್ಮ ರಾಜ್ಯದ ವ್ಯಾಪ್ತಿಯಲ್ಲಿ 45 ಕಿಲೋಮೀಟರ್ ನಷ್ಟು ಮಾರ್ಗ ಬರುತ್ತದೆ. ಈ ಯೋಜನೆಯನ್ನು ಕೇಂದ್ರ ರೈಲ್ವೆ ಇಲಾಖೆ ತಿರಸ್ಕರಿಸಿತ್ತು. ನಂತರ ಉಭಯ ರಾಜ್ಯದವರು ಒಪ್ಪಿಗೆ ಕೊಟ್ಟರೆ ಪರಿಗಣಿಸುವುದಾಗಿ ತಿಳಿಸಿತ್ತು. ಹಾಗಾಗಿ ವಿಜಯನ್ ಬಂದು ಚರ್ಚಿಸಿದರು‌.

ಆದರೆ ನಾವು ಕೇರಳದ ಪ್ರಸ್ತಾಪವನ್ನು ತಿರಸ್ಕಾರ ಮಾಡಿದ್ದೇವೆ. ಈ ಮಾರ್ಗ ಸುಬ್ರಮಣ್ಯ, ಸುಳ್ಯ ಭಾಗದಲ್ಲಿ ಬರುತ್ತದೆ. ಇದು ಎಕೋಸೆನ್ಸಿಟೀವ್ ಜೋನ್ ಆಗಿದೆ. ಅಲ್ಲದೆ ನಮ್ಮ ರಾಜ್ಯದ ಪ್ರಯಾಣಿಕರಿಗೆ ಲಾಭದಾಯಕವೂ ಅಲ್ಲ. ಹಾಗಾಗಿ ರಿಜೆಕ್ಟ್ ಮಾಡಿದ್ದೇವೆ. ಕೇರಳ ಮೈಸೂರು ಮಾರ್ಗದ ಬಗ್ಗೆ ಚರ್ಚೆಯಾಯ್ತು. ಇದು, ನಾಗರಹೊಳೆ, ಬಂಡೀಪುರ ಎಕೋಸೆನ್ಸೀಟೀವ್ ಜೋನ್ ವ್ಯಾಪ್ತಿಗೆ ಬರಲಿದೆ. ಹುಲಿ ಮತ್ತು ಆನೆ ಕಾರಿಡಾರ್ ಇರುವ ಸ್ಥಳವಾಗಿದೆ. ಹಾಗಾಗಿ ನಮ್ಮ ಪರಿಸರ ಸಂಪತ್ತಿನ ರಕ್ಷಣೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕೇರಳ ಸಿಎಂಗೆ ತಿಳಿಸಿ ಅವರು ಮಂಡಿಸಿದ ಎರಡೂ ಪ್ರಸ್ತಾಪಗಳನ್ನು ತಿರಿಸ್ಕಾರ ಮಾಡಿದ್ದಾಗಿ ತಿಳಿಸಿದರು.

ಸುರಂಗ ಮಾರ್ಗ ನಿರ್ಮಾಣಕ್ಕೆ ಮನವಿ
ಅರಣ್ಯ ವ್ಯಾಪ್ತಿಗೆ ಧಕ್ಕೆಯಾಗದಂತೆ ಸುರಂಗ ಮಾರ್ಗವನ್ನಾದರೂ ಮಾಡಲು ಒಪ್ಪಿಗೆ ನೀಡಿ ಎಂದು ಕೇರಳ ಸಿಎಂ ವಿನಂತಿಸಿಕೊಂಡಿದ್ದರು. ಆದರೆ ಅದನ್ನೂ ನಾವು ಒಪ್ಪಲಿಲ್ಲ. ಸುರಂಗ ಮಾರ್ಗ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗಲಿದೆ. ಅಲ್ಲದೆ ಸುರಂಗ ನಿರ್ಮಾಣದ ಪರಿಣಾಮ ಭೂಮಿಯ ಮೇಲೆಯೂ ಆಗಲಿದೆ. ಹಾಗಾಗಿ ಸುರಂಗ ಮಾರ್ಗಕ್ಕೂ ಒಪ್ಪಿಗೆ ನೀಡಿಲ್ಲ ಎಂದರು.

4 ಬಸ್ ಸಂಚಾರ ಪ್ರಸ್ತಾಪ
ಬಳಿಕ ರಾತ್ರಿ ವೇಳೆ ನಾಗರಹೊಳೆ, ಬಂಡೀಪುರ ಮಾರ್ಗದಲ್ಲಿ 2 ಬಸ್ ಬದಲು 4 ಬಸ್ ಸಂಚಾರಕ್ಕೆ ಬಿಡಿ ಎಂದು ಕೇಳಲಾಯಿತು. ಆದರೆ ಆ ಪ್ರಪೋಸಲ್​ನನ್ನು ಕೂಡ ತಿರಸ್ಕರಿಸದ್ದೇವೆ. ನಾಗರಹೊಳೆ ಮತ್ತು ಬಂಡೀಪುರ ಎಕೋಸೆನ್ಸಿಟೀವ್ ಜೋನ್ ಆಗಿರುವ ಕಾರಣ ಅವರ ಪ್ರಸ್ತಾಪ ನಾವು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಮಾರ್ಗದ ಪ್ರಸ್ತಾಪ ಬಗ್ಗೆ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ಪ್ರಸ್ತಾಪ ಬಂದಿಲ್ಲ. ಅವರು ಪ್ರಸ್ತಾಪ ಕಳಿಸಲಿ ನಂತರ ನೋಡಿ ನಾವು ನಿರ್ಧಾರ ಮಾಡಲಿದ್ದೇವೆ. ಆದರೆ ಯಾವ ಕಾರಣಕ್ಕೂ ಪರಿಸರ ಸೂಕ್ಷ್ಮ ಪ್ರದೇಶದ ವಿಚಾರದಲ್ಲಿ ನಾವು ರಾಜಿಯಾಗಲ್ಲ ಎಂದು ಸಿಎಂ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!