ಪಾಕ್‌ ನಲ್ಲಿ ಶಿಯಾ ಮೆರವಣಿಗೆ ಮೇಲೆ ಪಿಸ್ತೂಲ್, ಕಲ್ಲಿಂದ ದಾಳಿ ನಡೆಸಿದ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪು: 13 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶಿಯಾ ಗುಂಪಿನ ಮೆರವಣಿಗೆಯ ಮೇಲೆ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪಿನ ಕಾರ್ಯಕರ್ತರು ತೀವ್ರವಾದ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕನಿಷ್ಠ 13 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಎಫ್‌ಐಆರ್‌ನ ಪ್ರಕಾರ, ಲಾಹೋರ್‌ನಿಂದ ಸುಮಾರು 130 ಕಿಮೀ ದೂರದಲ್ಲಿರುವ ಸಿಯಾಲ್‌ಕೋಟ್‌ನಲ್ಲಿರುವ ಇಮಾಂಬರ್ಗಾ (ಸಭೆಯ ಸಭಾಂಗಣ) ದತ್ತ ಶಿಯಾ ಗುಂಪಿನ ಮೆರವಣಿಗೆಯು ಹೋಗುತ್ತಿದ್ದಾಗ ಪಿಸ್ತೂಲ್‌ಗಳು, ಕೋಲುಗಳು ಮತ್ತು ಕಲ್ಲುಗಳಿಂದ ಶಸ್ತ್ರಸಜ್ಜಿತವಾದ ಜನರ ಗುಂಪೊಂದು ಶಿಯಾ ಜನರ ಮೇಲೆ ದಾಳಿ ಮಾಡಿದೆ.
ಚೆಹ್ಲುಮ್ ಎಂಬುದು ಶಿಯಾಗಳ ಧಾರ್ಮಿಕ ಆಚರಣೆಯಾಗಿದ್ದು, ಇದು ಮೊಹರಂ ತಿಂಗಳ 10 ನೇ ದಿನದಂದು ಹುತಾತ್ಮರಾದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಹುತಾತ್ಮತೆಯನ್ನು ಸ್ಮರಿಸುತ್ತದೆ.
“ಒಂದು ಡಜನ್‌ಗೂ ಹೆಚ್ಚು ಶೋಕಾರ್ಥಿಗಳು ಗಾಯಗೊಂಡಿದ್ದಾರೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಈ ಮೆರವಣಿಗೆಯ ಮಾರ್ಗದ ಕುರಿತು ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ (ಟಿಎಲ್‌ಪಿ) ಮತ್ತು ಶಿಯಾ ಕಾರ್ಯಕರ್ತರ ನಡುವೆ ಕಳೆದ ಕೆಲವು ದಿನಗಳಿಂದ ಉದ್ವಿಗ್ನತೆ ಉಂಟಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
“ಟಿಎಲ್‌ಪಿ ಸ್ಥಳೀಯ ಮುಖಂಡರು ಶಿಯಾ ಮೆರವಣಿಗೆಯು ತಮ್ಮ ಮಸೀದಿ ಹಾಗೂ ಸೆಮಿನರಿ ಮುಂದೆ ಹಾದು ಹೋಗಬಾರದು ಎಂದು ಆದೇಶಿಸಿದ್ದಾರೆ. ಆದರೆ ಸ್ಥಳೀಯ ಶಿಯಾಗಳು ಪ್ರತಿ ವರ್ಷ ಹೋಗುವ ಹಾಗೆ ಅದೇ ಮಾರ್ಗದಲ್ಲಿ ಇಮಾಂಬರ್ಗಾಗೆ ಹೋಗಲು ನಿರ್ಧರಿಸಿದ್ದಾರೆ” ಎಂದು ಅಧಿಕಾರಿ ಹೇಳಿದ್ದಾರೆ.
“ಪೊಲೀಸ್ ಅಧಿಕಾರಿಗಳು ಎರಡೂ ಪಂಗಡಗಳ ಜೊತೆ ಮಾತುಕತೆ ನಡೆಸಿದ್ದರು ಮತ್ತು ಮೆರವಣಿಗೆ ಮಾರ್ಗವನ್ನು ವಿರೋಧಿಸುವುದಿಲ್ಲ ಎಂದು ಟಿಎಲ್‌ಪಿ ನಾಯಕರು ಒಪ್ಪಿಕೊಂಡಿದ್ದರು” ಎಂದು ಅಧಿಕಾರಿ ಹೇಳಿದರು. ಆದಾಗ್ಯೂ, ಟಿಎಲ್‌ಪಿ ಕಾರ್ಯಕರ್ತರ ಗುಂಪು ಶಹಬ್‌ಪುರದ (ಸಿಯಾಲ್‌ಕೋಟ್‌) ಆಲಂ ಚೌಕ್‌ನಲ್ಲಿರುವ ಅವರ ಮಸೀದಿಯಿಂದ ಹೊರಬಂದು ಶಿಯಾ ಮೆರವಣಿಗೆ ಗುಂಪಿನ ಮೇಲೆ ದಾಳಿ ನಡೆಸಿತು.
“ಶಿಯಾ ಸಮುದಾಯಕ್ಕೆ ಸೇರಿದ ಹದಿಮೂರು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ದಂಪತಿಗಳ ಸ್ಥಿತಿ ಗಂಭೀರವಾಗಿದೆ ಏಕೆಂದರೆ ಅವರಿಗೆ ತಲೆಗೆ ಗಾಯಗಳಾಗಿವೆ” ಎಂದು ಅಧಿಕಾರಿ ಹೇಳಿದರು.
ಸಿಯಾಲ್‌ಕೋಟ್‌ ಪೊಲೀಸ್‌ ಮುಖ್ಯಸ್ಥ ಫೈಸಲ್‌ ಕಮ್ರಾನ್‌ ಮಾತನಾಡಿ, ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ, ದಾಳಿಕೋರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ. ಅವರು 30 ಕ್ಕೂ ಅಧಿಕ ಜನರಿದ್ದರು, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುವ ವೀಡಿಯೊ ಕ್ಲಿಪ್‌ಗಳಲ್ಲಿ ಹಲವಾರು ಜನರು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಗುಂಡು ಹಾರಿಸುವುದನ್ನು ಮತ್ತು ಶಿಯಾ ಮೆರವಣಿಗೆಯಲ್ಲಿ ಭಾಗವಹಿಸುವವರ ಮೇಲೆ ದಾಳಿ ಮಾಡುವುದನ್ನು ತೋರಿಸಿದೆ.
“#ShameOnTLP ಮತ್ತು #SialkotJuloosAttack” ಭಾನುವಾರ ಪಾಕ್ ಟ್ವಿಟರ್‌ನಲ್ಲಿ ಟಾಪ್ ಟ್ರೆಂಡ್ ಆಗಿದ್ದು, ಹೆಚ್ಚಿನ ಜನರು ದಾಳಿಯನ್ನು ಖಂಡಿಸಿದ್ದಾರೆ. ಮತ್ತು ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು ಮತ್ತು TLP ಅನ್ನು ನಿಷೇಧಿಸಲು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!