August 8, 2026
Saturday, August 8, 2026
spot_img

ಮಳೆಯಿಂದ ಬದಲಾಯ್ತು ಭವಿಷ್ಯ: 2027ರ ಮಹಾಸಮರಕ್ಕೆ ಅಫ್ಘಾನಿಸ್ತಾನ್ ಸಜ್ಜು, ಐರ್ಲೆಂಡ್ ಕನಸು ಭಗ್ನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ್ ಕ್ರಿಕೆಟ್ ತಂಡವು 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಐಸಿಸಿ ನಿಗದಿಪಡಿಸಿದ್ದ ಸೆಪ್ಟೆಂಬರ್ 30ರ ಗಡುವಿಗೂ ಮುನ್ನವೇ ಅಫ್ಘಾನ್ ಪಡೆ ಶ್ರೇಷ್ಠ ಪ್ರದರ್ಶನದ ಆಧಾರದ ಮೇಲೆ ವಿಶ್ವಕಪ್ ಆಡುವ ತನ್ನ ಜಾಗವನ್ನು ಅಧಿಕೃತವಾಗಿ ಕಾಯ್ದಿರಿಸಿದೆ.

ಐರ್ಲೆಂಡ್ ಕನಸು ಭಗ್ನ

2027ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಐರ್ಲೆಂಡ್ ತಂಡಕ್ಕೆ ಅಫ್ಘಾನಿಸ್ತಾನ್ ವಿರುದ್ಧದ 5 ಪಂದ್ಯಗಳ ಸರಣಿಯನ್ನು 5-0 ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ಬ್ರೆಡಿಯಲ್ಲಿ ನಡೆಯಬೇಕಿದ್ದ ಸರಣಿಯ ಮೊದಲ ಪಂದ್ಯವೇ ಮಳೆಯಿಂದಾಗಿ ರದ್ದಾಯಿತು. ಇದರಿಂದಾಗಿ ಐರ್ಲೆಂಡ್‌ಗೆ ರೇಟಿಂಗ್ ಪಾಯಿಂಟ್‌ಗಳ ಆಧಾರದಲ್ಲಿ ಅಫ್ಘಾನಿಸ್ತಾನ್ ತಂಡವನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂಬುದು ಖಾತರಿಯಾಯಿತು.

ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್‌ಗೆ ಗ್ಲೋಬಲ್ ಕ್ವಾಲಿಫೈಯರ್ ಹಾದಿ

ಐಸಿಸಿ ರ‍್ಯಾಂಕಿಂಗ್ ಆಧಾರದಲ್ಲಿ ಅರ್ಹತೆ ಪಡೆಯುವ ಅವಕಾಶದಿಂದ ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ತಂಡಗಳು ಹೊರಬಿದ್ದಿವೆ. ಈ ಎರಡು ತಂಡಗಳು 2027ರ ಆರಂಭದಲ್ಲಿ ನಡೆಯಲಿರುವ 10 ತಂಡಗಳ ‘ಗ್ಲೋಬಲ್ ಕ್ವಾಲಿಫೈಯರ್’ ಟೂರ್ನಿಯಲ್ಲಿ ಆಡುವುದು ಅನಿವಾರ್ಯವಾಗಿದೆ. ಅಲ್ಲಿ ಸೂಕ್ತ ಸ್ಥಾನ ಗಳಿಸಿದರೆ ಮಾತ್ರ ಈ ತಂಡಗಳಿಗೆ ವಿಶ್ವಕಪ್‌ಗೆ ಅರ್ಹತೆ ಸಿಗಲಿದೆ.

2027ರ ವಿಶ್ವಕಪ್ ಅರ್ಹತಾ ನಿಯಮ ಮತ್ತು ನೇರ ಅರ್ಹತೆ ಪಡೆದ 10 ತಂಡಗಳು

2027ರ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿದ್ದು, 10 ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತವೆ ಹಾಗೂ 4 ತಂಡಗಳು ಅರ್ಹತಾ ಸುತ್ತಿನ (ಕ್ವಾಲಿಫೈಯರ್) ಮೂಲಕ ಆಯ್ಕೆಯಾಗಲಿವೆ.

  • ಆತಿಥೇಯ ರಾಷ್ಟ್ರಗಳು: ದಕ್ಷಿಣ ಆಫ್ರಿಕಾ ಮತ್ತು ಝಿಂಬಾಬ್ವೆ (ನೇರ ಎಂಟ್ರಿ).
  • ರ‍್ಯಾಂಕಿಂಗ್ ಆಧಾರದಲ್ಲಿ ಆಯ್ಕೆಯಾದ 8 ತಂಡಗಳು: ಭಾರತ, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಪಾಕಿಸ್ತಾನ್, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !