ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಶನಿವಾರ ಮುಂಜಾನೆ ವೈಟ್‌ಫೀಲ್ಡ್ ಮತ್ತು ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ವೈಟ್‌ಫೀಲ್ಡ್‌ನಲ್ಲಿ ಮಗಳ ಕಣ್ಣೆದುರೇ ತಾಯಿಯೊಬ್ಬರು ಶಾಲಾ ಬಸ್‌ಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ನಡೆದರೆ, ಕೆಂಗೇರಿ ಬಳಿ ಅತಿ ವೇಗವಾಗಿ ಬಂದ ಕಾರೊಂದು ಪಲ್ಟಿಯಾಗಿ ಒಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಮೂವರು ಬೈಕ್ ಸವಾರರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ವೈಟ್‌ಫೀಲ್ಡ್‌ನಲ್ಲಿ ಶಾಲಾ ಬಸ್ ಹರಿದು ಮಹಿಳೆ ದುರ್ಮರಣ
ಇಂದು ಮುಂಜಾನೆ ಎಂದಿನಂತೆ ರಸ್ತೆಯಲ್ಲಿ ಹೊರಟಿದ್ದ ಮಹಿಳೆಯೊಬ್ಬರು ತಮ್ಮ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು, ಹಿಂದಿನಿಂದ ಬಂದ ಶಾಲಾ ಬಸ್ ಹರಿದ ಪರಿಣಾಮ ತೀವ್ರ ಗಾಯಗೊಂಡು ಸಾವನ್ನಪ್ಪಿದ ಘಟನೆ ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಕಾಂತ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಕಾಂತ, ತಮ್ಮ ಮಗಳು ನೇಹಾಳನ್ನು ಕಾಲೇಜಿಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ತಾಯಿ-ಮಗಳಿಬ್ಬರು ಮಾರ್ತಹಳ್ಳಿಯಿಂದ ಸಿದ್ದಾಪುರ ಕಡೆಗೆ ಚಲಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಜಲಾವೃತಗೊಂಡಿದ್ದು, ಗುಂಡಿಗಳು ಮುಚ್ಚಿಹೋಗಿದ್ದವು. ರಸ್ತೆಯಲ್ಲಿ ಸಾಗುವಾಗ ಸ್ಕೂಟರ್ ಹೊಂಡಕ್ಕೆ ಬಿದ್ದ ಪರಿಣಾಮ ತಾಯಿ ಮತ್ತು ಮಗಳಿಬ್ಬರೂ ರಸ್ತೆಗೆ ಬಿದ್ದಿದ್ದಾರೆ. ತಾಯಿ ಕಾಂತ ಎದ್ದು ನಿಲ್ಲುವ ಮೊದಲೇ ಹಿಂದಿನಿಂದ ಬರುತ್ತಿದ್ದ ಶಾಲಾ ಬಸ್ ಅವರ ಮೇಲೆ ಹರಿದಿದೆ.
ಸ್ಥಳೀಯ ನಿವಾಸಿಗಳು ತಕ್ಷಣ ಅವರ ಸಹಾಯಕ್ಕೆ ಧಾವಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ, ಗಂಭೀರ ಗಾಯಗೊಂಡಿದ್ದ ಕಾಂತ ಸ್ಥಳದಲ್ಲೇ ಕೊನೆಯುಸಿರೆಳೆದರು. ಮಗಳು ನೇಹಾ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಂಗೇರಿ ಬಳಿ ಅತಿ ವೇಗವಾಗಿ ಬಂದ ಕಾರು ಪಲ್ಟಿ: ಒಬ್ಬ ಸಾವು, ಮೂವರಿಗೆ ಗಾಯ
ಮೈಸೂರು ರಸ್ತೆಯ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ಅತಿ ವೇಗ ಮತ್ತು ಬೇಜವಾಬ್ದಾರಿಯ ಚಾಲನೆಯಿಂದಾಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದು, ಮೂವರು ಗಾಯಗೊಂಡಿದ್ದಾರೆ.
ಕೆಂಗೇರಿ ಸಂಚಾರಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಮಾರುತಿ ಸುಜುಕಿ ಇಕೋ ಕಾರು ಎರಡು ಮೋಟಾರ್ ಸೈಕಲ್‌ಗಳಿಗೆ ಡಿಕ್ಕಿ ಹೊಡೆದಿದೆ. ಭಾರಿ ವೇಗದ ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ಜನನಿಬಿಡ ಹೆದ್ದಾರಿಯಲ್ಲಿ ಹಲವು ಬಾರಿ ಪಲ್ಟಿಯಾಗಿದೆ.
ಕಾರು ಪಲ್ಟಿಯಾಗುತ್ತಿದ್ದ ಸಂದರ್ಭದಲ್ಲಿ ಅದರಲ್ಲಿದ್ದ ಸುಖ್‌ದೇವ್ ಎಂಬುವವರು ವಾಹನದಿಂದ ಹೊರಕ್ಕೆ ಬಿದ್ದಿದ್ದಾರೆ. ದುರದೃಷ್ಟವಶಾತ್, ಉರುಳುತ್ತಿದ್ದ ಕಾರು ನೇರವಾಗಿ ಅವರ ಮೇಲೆಯೇ ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನಗಳಲ್ಲಿದ್ದ ಮೂವರು ಸವಾರರು ಗಾಯಗೊಂಡಿದ್ದಾರೆ.
ಸ್ಥಳೀಯರು ಮತ್ತು ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹೊಸಕೋಟೆಯಲ್ಲಿ 400ವರ್ಷ ಹಳೆಯ ಆಲದ ಮರ ಬುಡಮೇಲು
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಹೊಸಕೋಟೆ ತಾಲೂಕಿನ ಸುಲಿಬೆಲೆ ಹೋಬಳಿಯ ಬಾಳೇನಹಳ್ಳಿಯಲ್ಲಿ ಸುಮಾರು 400 ವರ್ಷಗಳ ಇತಿಹಾಸವಿರುವ ಬೃಹತ್ ಹೆರಿಟೇಜ್ ಆಲದ ಮರವೊಂದು ಬುಡಮೇಲಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮರ ಬಿದ್ದ ರಭಸಕ್ಕೆ ಹತ್ತಿರದಲ್ಲಿದ್ದ ಎರಡು ಟ್ರ್ಯಾಕ್ಟರ್‌ಗಳು ಮತ್ತು ದನದ ಕೊಟ್ಟಿಗೆ ಸಂಪೂರ್ಣವಾಗಿ ಜಖಂಗೊಂಡಿವೆ.



