ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಶೇ 50 ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗಸ್ಟ್ ನಲ್ಲಿ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಮಾಡಿದ್ದೇವೆ. ರಾಜ್ಯದ ಶೇ.50ಕ್ಕೂ ಹೆಚ್ಚು ಭಾಗದಲ್ಲಿ ಮಳೆ ಕೊರತೆಯಾಗಿದೆ. ಮೇವಿನ ಸ್ಥಿತಿ, ಜಲಾಶಯಗಳ ನೀರಿನ ಸಂಗ್ರಹ ಸ್ಥಿತಿ ಗತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಬಿತ್ತನೆ ಬೆಳೆಗಳೂ ಒಣಗುತ್ತಿರುವುದರಿಂದ ಕ್ರಮ ತೆಗೆದುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಸೆಪ್ಟೆಂಬರ್ ನಲ್ಲೂ ವಾಡಿಕೆಗಿಂತ ಮಳೆ ಕಡಿಮೆ ಆಗಬಹುದು ಎಂದು ತಿಳಿಸಿದರು.
ಈ ರೀತಿ ಮಳೆ ಕೊರತೆ ಮುಂದುವರಿದರೆ ಎಲ್ಲದಕ್ಕೂ ನಾವು ಸನ್ನದ್ದವಾಗಬೇಕಾಗುತ್ತದೆ. ಕುಡಿಯುವ ನೀರಿಗೆ ಅಂತಹ ಸಮಸ್ಯೆ ಏನಿಲ್ಲ. 140 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಮೇವಿನ ಸ್ಥಿತಿ ಕೂಡ 15-30 ವಾರಗಳಿಗೆ ಆಗುವಷ್ಟು ಸಂಗ್ರಹ ಇದೆ. ರಾಜ್ಯದಲ್ಲಿ ಆಲಮಟ್ಟಿ ಜಲಾಶಯ ಮಾತ್ರ ಶೇ.100 ಭರ್ತಿಯಾಗಿದೆ. ಬರ ಘೋಷಣೆ ಆಗಬೇಕು ಎಂಬ ಮನವಿ ಕೂಡ ಇದೆ. ಈ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿ ಮಾಹಿತಿ ಪಡೆದುಕೊಂಡಿದೆ. ಬರ ಘೋಷಣೆ ಆಗಲು ಏನೇನು ಮಾನದಂಡ ಇದೆ ಎಂಬ ಬಗ್ಗೆ ಚರ್ಚೆ ಆಗಿದೆ ಎಂದರು.
ಕೇಂದ್ರದ ಮಾನದಂಡದ ಪ್ರಕಾರ ಬರ ಘೋಷಣೆ ಮಾಡುವ ಮೊದಲು ಕೇಂದ್ರದ ಫಾರ್ಮ್ಯಾಟ್ ಪ್ರಕಾರ ಬೆಳೆ ಸಮೀಕ್ಷೆ ಆಗಬೇಕು. ಬೆಳೆಗಳ ಪರಿಸ್ಥಿತಿ ಬಗ್ಗೆ ಸ್ಪಾಟ್ ಹೋಗಿ ಜಿಲ್ಲಾಧಿಕಾರಿಗಳ ವರದಿ ಬರಬೇಕು. ಅಧಿಕಾರಿಗಳಿಗೆ ತಕ್ಷಣ ಸ್ಯಾಂಪಲ್ ಬೆಳೆ ಸಮೀಕ್ಷೆ ಮಾಡಬೇಕು ಅಂತ ಸೂಚನೆ ನೀಡಿದ್ದೇವೆ. 120 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಮಾಡಿ 10 ದಿನಗಳ ಒಳಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದೇವೆ. ಇದು ಕಡ್ಡಾಯ ಮಾನದಂಡ ಆಗಿದ್ದು ವರದಿ ಆಧರಿಸಿ ಬರ ಘೋಷಣೆ ಪ್ರಕ್ರಿಯೆ ಮಾಡ್ತೇವೆ. ಬರ ಘೋಷಣೆಗೆ ಬೇಕಾದ ಎಲ್ಲ ಮಾನದಂಡ ಪಾಲನೆ ಮಾಡ್ತಿದ್ದೇವೆ ಎಂದರು.