ಮೆಲ್ಬೋರ್ನ್‌ನಲ್ಲಿ ಮಳೆಯ ಬೆದರಿಕೆ: ಟಿ20 ಫೈನಲ್‌ ಪಂದ್ಯಕ್ಕೆ ಭಾರಿ ಬದಲಾವಣೆ ಮಾಡಿದ ಐಸಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನಾಳೆ ಇಂಗ್ಲೆಂಡ್‌ ಹಾಗೂ ಪಾಕಿಸ್ತಾನದ ನಡುವಿನ ಐಸಿಸಿ ಟಿ20 ವಿಶ್ವಕಪ್‌ – 2022ರ ಫೈನಲ್‌ ಪಂದ್ಯಕ್ಕೆ ಮೇಲ್ಬೋರ್ನ್‌ ಮೈದಾನ ಸಾಕ್ಷಿಯಾಗಲಿದೆ. ಆದರೆ ಪಂದ್ಯಕ್ಕೆ ವರುಣನ ಅವಕೃಪೆಯ ಕಾರ್ಮೋಡಗಳು ದಟ್ಟವಾಗಿದ್ದು 80 ಶೇಕಡಾದಷ್ಟು ಮಳೆಯಾಗುವ ಸಂಭವಿದೆ. ಈ ಹಿನ್ನೆಲೆಯಲ್ಲಿ ಸೋಮವಾರವನ್ನು ಈಗಾಗಲೇ ಪಂದ್ಯಕ್ಕೆಂದೇ ಮೀಸಲಿಡಲಾಗಿದ್ದು ಇದೀಗ ಸೋಮವಾರವೂ ಮಳೆಯ ಸಂಭವ ಜಾಸ್ತಿಯಿದೆ. ಹೀಗಾಗಿ ಐಸಿಸಿ ಪಂದ್ಯದಲ್ಲಿ ಭಾರೀ ಬದಲಾವಣೆಗಳನ್ನು ತಂದಿದೆ ಎಂದು ವರದಿಯಾಗಿದೆ.

ಮೀಸಲು ದಿನದ ಆಟದ ಸಮಯವನ್ನು ಎರಡು ಗಂಟೆಯಿಂದ ನಾಲ್ಕು ಗಂಟೆಗೆ ಐಸಿಸಿ ಹೆಚ್ಚಿಸಲು ನಿರ್ಧರಿಸಿದೆ. “ಈವೆಂಟ್ ಟೆಕ್ನಿಕಲ್ ಕಮಿಟಿ (ಇಟಿಸಿ) ಮೀಸಲು ದಿನದಂದು ಹೆಚ್ಚುವರಿ ಆಟದ ಸಮಯವನ್ನು ಎರಡು ಗಂಟೆಗಳ ಮೂಲ ನಿಬಂಧನೆಯಿಂದ ನಾಲ್ಕು ಗಂಟೆಗಳವರೆಗೆ ಹೆಚ್ಚಿಸಿದೆ, ಪಂದ್ಯ ಮತ್ತು ಫಲಿತಾಂಶವನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ” ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಗತ್ಯವಿದ್ದರೆ, ಫೈನಲ್ ಅನ್ನು ಪೂರ್ಣಗೊಳಿಸಲು ಮೀಸಲು ದಿನದಂದು 9:30 IST ಕ್ಕೆ ಆಟವನ್ನು ಪ್ರಾರಂಭಿಸಬಹುದು ಎನ್ನಲಾಗಿದೆ. ಇದು ವಿಶ್ವಕಪ್ ಫೈನಲ್‌ ಪಂದ್ಯವಾಗಿರುವುದರಿಂದ ಫಲಿತಾಂಶ ನೀಡಬೇಕಾದರೆ ಎರಡೂ ಕಡೆ ಕನಿಷ್ಟ ಹತ್ತು ಓವರ್‌ ಗಳು ಪೂರ್ಣಗೊಂಡಿರಬೇಕಾಗುತ್ತದೆ. ಹಾಗಾಗಿಯೇ ಹೆಚ್ಚಿನ ಸಮಯವನ್ನು ಮೀಸಲಿಡಲಾಗಿದೆ. ರವಿವಾರದಂದು 10 ಓವರ್‌ ಗಳ ಕನಿಷ್ಟ ಪ್ರಮಾಣ ಪೂರ್ಣಗೊಂಡಿಲ್ಲವೆಂದರೆ ಮಾತ್ರ ಮರುದಿನ ಸೋಮವಾರದ ಮೀಸಲು ದಿನವನ್ನು ಬಳಸುವ ನಿರ್ಧಾರ ಕೈಗೊಳ್ಳಲಾಗಿದೆ.

ಎರಡೂ ಕಡೆಯವರು 10-ಓವರ್‌ಗಳ ಪಂದ್ಯವನ್ನು ಆಡಿದರೂ ಸಹ, ಪಂದ್ಯದ ಅಧಿಕಾರಿಗಳು ಭಾನುವಾರದಂದು ಫಲಿತಾಂಶವನ್ನು ಪಡೆಯಲು ತಮ್ಮ ಮಟ್ಟದ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ. ಪರಿಸ್ಥಿತಿಗಳು ಅನುಮತಿಸದಿದ್ದರೆ ಭಾನುವಾರ ಬಿಟ್ಟುಹೋದ ಪಾಯಿಂಟ್‌ನಿಂದ ಸೋಮವಾರ ಪಂದ್ಯ ಪ್ರಾರಂಭವಾಗಲಿದೆ.

“ನಾಕೌಟ್ ಹಂತದಲ್ಲಿ ಪಂದ್ಯವನ್ನು ರೂಪಿಸಲು ಪ್ರತಿ ತಂಡಕ್ಕೆ 10 ಓವರ್‌ಗಳ ಅಗತ್ಯವಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿಗದಿತ ಪಂದ್ಯದ ದಿನದಂದು ಪಂದ್ಯವನ್ನು ಪೂರ್ಣಗೊಳಿಸಲು ಎಲ್ಲಾ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗುವುದು, ಅಗತ್ಯಬಿದ್ದರೆ ಓವರ್‌ಗಳ ಕಡಿತವು ನಡೆಯುತ್ತದೆ.ಒಂದು ಪಂದ್ಯವನ್ನು ರೂಪಿಸಲು ಅಗತ್ಯವಾದ ಕನಿಷ್ಠ ಸಂಖ್ಯೆಯ ಓವರ್‌ಗಳನ್ನು ಭಾನುವಾರ ಬೌಲ್ ಮಾಡಲು ಸಾಧ್ಯವಾಗದಿದ್ದರೆ ಮಾತ್ರ ಪಂದ್ಯವು ಮೀಸಲು ದಿನಕ್ಕೆ ಹೋಗುತ್ತದೆ. ಮೀಸಲು ದಿನದ ಆಟವು 1500h (9:30 AM IST) ಕ್ಕೆ ಪ್ರಾರಂಭವಾಗುತ್ತದೆ ಮತ್ತು ನಿಗದಿತ ಪಂದ್ಯದ ದಿನದಿಂದ ಆಟದ ಮುಂದುವರಿಕೆಯಾಗುತ್ತದೆ” ಎಂದು ICC ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!