ಕೊಡಗಿನಲ್ಲಿ ಮಳೆ-ಗಾಳಿ-ಚಳಿ: ಜನಜೀವನ ಅಸ್ತವ್ಯಸ್ತ

ಹೊಸದಿಗಂತ ವರದಿ, ಮಡಿಕೇರಿ:
ಕಳೆದ ಎರಡು ವಾರಗಳಿಂದ ಮಹಾಮಳೆಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯ ಜನತೆ ಇದೀಗ ರಭಸವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಆತಂಕ ಪಡುವಂತಾಗಿದೆ.
ಕಳೆದ ಎರಡು ದಿನಗಳಿಂದ ಅತಿಯಾಗಿ ಬಯಸುತ್ತಿರುವ ಗಾಳಿಯಿಂದಾಗಿ ಹಲವೆಡೆ ಮರಗಳು ಧರೆಗುರುಳಿದ್ದು,ಮನೆಗಳು ವಿದ್ಯುತದ ಕಂಬಗಳು, ವಿದ್ಯುತ್ ಪರಿವರ್ತಕಗಳಿಗೆ ಹಾನಿಯುಂಟು ಮಾಡಿದೆ.
ಬುಧವಾರದಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದೆ. ಸೆಸ್ಕ್ ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ,ಒಂದೆಡೆ ವಿದ್ಯುತ್ ಮಾರ್ಗ ಸರಿಪಡಿಸುವಷ್ಟರಲ್ಲಿ ಮತ್ತೊಂದೆಡೆ ಸಂಪರ್ಕ ಕಡಿತಗೊಳ್ಳುತ್ತಿದೆ. ಇದರಿಂದಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಸವಾಲಾಗಿ ಪರಿಣಮಿಸಿದೆ.
ಮಳೆಯೊಂದಿಗೆ ರಭಸವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಅತಂಕಕ್ಕೊಳಗಾಗಿರುವ ಜನತೆ ಜೀವ ಕೈಯ್ಯಲ್ಲಿ ಹಿಡಿದು ರಾತ್ರಿ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅತಿ ಶೀತದಿಂದಾಗಿ ಜಾನುವಾರುಗಳು ಸಾವನ್ನಪ್ಪಿದ ಘಟನೆ ನಡೆದಿದ್ದರೆ, ಅತಿಯಾದ ಗಾಳಿ-ಮಳೆಗೆ ಸಿದ್ದಾಪುರದಲ್ಲಿ ಮನೆಯೊಂದರ ಗೋಡೆ ಕುಸಿದ ಘಟನೆ ನಡೆದಿದೆ.ಬೇಳೂರು ಗ್ರಾಮ ಪಂಚಾಯ್ತಿಯ ಬಜೆಗುಂಡಿಯಲ್ಲಿ ವಿಜಯ ಎಂಬವರ ಮನೆಯ ಹಿಂಭಾಗ ಕುಸಿದಿದೆ. ಕೊಡ್ಲಿಪೇಟೆಯ ಮಾದ್ರೆ ಗ್ರಾಮದ ಗುಂಡೆಗೌಡ ಎಂಬವರ ಮನೆ ಬಹುತೇಕ ಕುಸಿದಿದೆ. ಶನಿವಾರಸಂತೆಯ ಮುಳ್ಳೂರು ಗ್ರಾಮದ ಕೆ.ಟಿ.ಗಂಗಮ್ಮ ಎಂಬವರ ಮನೆಯ ಗೋಡೆ ಕುಸಿತಕ್ಕೆ ಒಳಗಾಗಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 3ರ ವಲ್ಲಭಾಯಿ ರಸ್ತೆಯಲ್ಲಿ ವಾಸವಾಗಿರುವ ಮಹದೇವಮ್ಮ ಎಂಬುವರಿಗೆ ಸೇರಿದ ಮನೆ ಮಳೆಯಿಂದ ಶಿಥಿಲಗೊಂಡು ಬಿದ್ದು ಹೋಗಿದೆ.
ಸೋಮವಾರಪೇಟೆ ಪಟ್ಟಣ ಸಮೀಪದ ಕೂಗೆಕೋಡಿ ಗ್ರಾಮದ ಜಯಮ್ಮ ಎಂಬವರ ಮನೆ ಒಂದು ಭಾಗ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಸಂಪೂರರ್ಣ ಕುಸಿದಿದೆ. ಅನಾರೋಗ್ಯಪೀಡಿತರು ಹಾಗೂ ವಯಸ್ಕರಾಗಿರುವ ಜಯಮ್ಮ ಒಂಟಿಯಾಗಿ ಜೀವನ ನಡೆಸುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ತುರ್ತಾಗಿ ಪರಿಹಾರ ಒದಗಿಸಿಕೊಡಬೇಕಾಗಿ ಅವರು ಮನವಿ ಮಾಡಿಕೊಂಡಿದ್ದಾರೆ.
ಶಾಲೆಯ ಮೇಲೆ ಮರ: ಮಾದಾಪುರದ ಚನ್ನಬಸವೇಶ್ವರ ಶಾಲೆಯ ಮೇಲೆ ಮರ ಉರುಳಿದ್ದು, ರಾತ್ರಿ ಘಟನೆ ನಡೆದಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.ಶನಿವಾರಸಂತೆ, ಮಡಿಕೇರಿ-ಸೋಮವಾರಪೇಟೆ ರಸ್ತೆಯ ಕನ್ಮಂಡಬಾಣೆ ಬಳಿ, ಭಾಗಮಂಡಲ-ತಲಕಾವೇರಿ ರಸ್ತೆ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಬಳಿ ಮರಗಳು ಧರೆಗುರುಳಿ ವಾಹನ ಸಂಚಾರ ಹಾಗೂ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗಿದ್ದರೆ, ಪೆರಾಜೆ ಗ್ರಾಮದ ಕುಂದಲ್ಪಾಡಿ ಪ್ರದೇಶದಲ್ಲಿ ಬರೇ ಕುಸಿದು ಎಲ್ ಟಿ ಕಂಬ ತುಂಡಾಗಿದೆ. ಅಲ್ಲಿ ಬೇರೆ ಮಾರ್ಗದ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿದೆ.
ಜಾನುವಾರಗಳ ಸಾವು:
ನಿರಂತರ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಒಂದೇ ದಿನ ಮೂರು ಜಾನುವಾರುಗಳು ಸಾವನ್ನಪ್ಪಿವೆ.
ಸೋಮವಾರಪೇಟೆ ತಾಲೂಕಿನ ಬೆಟ್ಟದಕೊಪ್ಪ ಗ್ರಾಮದ ಹೂವಮ್ಮ ಅವರಿಗೆ ಸೇರಿದ 10 ವರ್ಷದ ಎತ್ತು ಮೇಯಲು ತೆರಳಿದ್ದ ಸಂದರ್ಭ ಗದ್ದೆಯಲ್ಲಿ ಸಾವನ್ನಪ್ಪಿದ್ದು, ಅಂದಾಜು 30 ಸಾವಿರ ರೂ. ನಷ್ಟ ಸಂಭವಿಸಿದೆ.
ಕುಂದಳ್ಳಿ ಸಮೀಪದ ಕನ್ನಳ್ಳಿ ಗ್ರಾಮದ ಸರೋಜ ಎಂಬವರಿಗೆ ಸೇರಿದ 6 ತಿಂಗಳ ಗಂಡು ಕರು ಅತೀ ಶೀತದಿಂದ ಸಾವನ್ನಪ್ಪಿದ್ದು, ಮಾಲಕರಿಗೆ ರೂ.5 ನಷ್ಟ ಸಂಭವಿಸಿದೆ.
ತೋಳೂರು ಶೆಟ್ಟಳ್ಳಿ ಗ್ರಾಮದ ಹೆಚ್.ಕೆ.ಗುರಪ್ಪ ಅವರಿಗೆ ಸೇರಿದ ಒಂದೂವರೆ ವರ್ಷದ ಕರು ಸಾವನ್ನಪ್ಪಿದೆ. ಮೇಯಲು ಬಿಟ್ಟಿದ್ದ ಜಾನುವಾರು ಶೀತಕ್ಕೆ ಬಲಿಯಾಗಿದೆ. ಸ್ಥಳಕ್ಕೆ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬದಾಮಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಕರಿಬಸವ ರಾಜು, ಉಮೇಶ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಗಾಳಿ,‌ ಮಳೆ, ಚಳಿಯಿಂದಾಗಿ ಜನಜೀವನವೇ ಅಸ್ತವ್ಯಸ್ತಗೊಂಡಿದೆ.
ಸಹಾಯವಾಣಿ: ಜಿಲ್ಲಾಡಳಿತ ವತಿಯಿಂದ ದಿನದ 24 ಗಂಟೆ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ 0872-221077, ವಾಟ್ಸಾಪ್ ಸಂಖ್ಯೆ 8550001077 ಗೆ ಮಳೆ ಹಾನಿ ಸಂಬಂಧ ಮಾಹಿತಿ ಹಂಚಿಕೊಳ್ಳಬಹುದಾಗಿದೆ.
ಹಾಗೆಯೇ ತಾಲೂಕುವಾರು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಮಡಿಕೇರಿ ತಾಲೂಕು 08272-228396, ಮಡಿಕೇರಿ ನಗರಸಭೆ ವ್ಯಾಪ್ತಿ 08272-220111, ವೀರಾಜಪೇಟೆ ತಾಲೂಕು 08274-256328, ಸೋಮವಾರಪೇಟೆ ತಾಲೂಕು 08276-282045 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!