ಹೊಸ ದಿಗಂತ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ಭಾರೀ ಮಳೆಯಾಗುತ್ತಿದ್ದು, ಹಲವೆಡೆಗಳಲ್ಲಿ ಮಳೆ ಅಧ್ವಾನ ಸ್ಥಿತಿ ಸೃಷ್ಟಿಸಿದೆ.
ಮಂಗಳೂರು ನಗರ ಸಹಿತ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸೋಮವಾರವೂ ಗುಡುಗು ಸಿಡಿಲು ರಹಿತ ಧಾರಾಕಾರ ಮಳೆಯಾಗುತ್ತಿದೆ. ಗ್ರಾಮೀಣ ಭಾಗದ ಹಲವೆಡೆ ಸಣ್ಣಪುಟ್ಟ ಭೂ ಕುಸಿತ, ಮನೆಗಳಿಗೆ ಹಾನಿ ಪ್ರಕರಣಗಳು ವರದಿಯಾಗುತ್ತಿವೆ.ರಾಷ್ಟ್ರೀಯ ಹೆದ್ದಾರಿಯ ತುಂಬೆ, ಕಲ್ಲಡ್ಕ, ತೊಕ್ಕೊಟ್ಟು ಮೊದಲಾದ ಪ್ರದೇಶಗಳಲ್ಲಿ ಮಳೆ ನೀರು ಸಂಚಾರಕ್ಕೆ ತೊಡಕುಂಟುಮಾಡಿದೆ.
ಉಳ್ಳಾಲ, ಪಣಂಬೂರು, ಸುರತ್ಕಲ್ ಪರಿಸರದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಮೋಜು ಮಸ್ತಿ, ನೀರಿಗೆ ಇಳಿಯುವುದು, ಮೀನು ಹಿಡಿಯುವುದು ಇತ್ಯಾದಿ ಚಟುವಟಿಕೆಗಳಿಗೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಮಾಡಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಂಗಳೂರು ಹೋಬಳಿಯ ಶಾಲಾ ಕಾಲೇಜುಗಳಿಗೆ ಇಂದು (ಜು.8) ರಜೆ ಘೋಷಣೆ ಮಾಡಲಾಗಿದೆ.