ಕೊಡಗು ಜಿಲ್ಲೆಯಲ್ಲಿ ಮಳೆ ಇಳಿಮುಖ: ಅಲ್ಲಲ್ಲಿ ಭೂಕುಸಿತ, ಹಾನಿ ನಿರಂತರ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಇಳಿಮುಖವಾಗಿದೆ. ಆದರೆ ಅಲ್ಲಲ್ಲಿ ಭೂಕುಸಿತ, ಮನೆ ಕುಸಿತದ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ತೋಟದಲ್ಲಿ ಮರ ಬಿದ್ದ ಪರಿಣಾಮ ಕಾರ್ಮಿಕರೊಬ್ಬರು ಸಾವಿಗೀಡಾಗಿದ್ದಾರೆ.
ಮಣ್ಣು ತೆರವು ಕಾರ್ಯಾಚರಣೆ: ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಬಳಿ ಬಿರುಕು ಬಿಟ್ಟಿದ್ದ ಗುಡ್ಡದ ಕೆಳಭಾಗದ ಮಣ್ಣು ಕುಸಿತಗೊಂಡಿದ್ದು, ಹಿಟಾಚಿ ಯಂತ್ರಗಳ ಮೂಲಕ ಮಣ್ಣು ತೆರವು ಕಾರ್ಯ ನಡೆಸಲಾಗುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಶುಕ್ರವಾರ ಮುಂಜಾನೆವರೆಗೂ ಈ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಬಳಿಯೂ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಕೊಡಗಿನಲ್ಲಿ ನಿರಂತರ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಜಾನುವಾರುಗಳು ಸಾವನ್ನಪ್ಪಿದ ಪ್ರಕರಣವೂ ನಡೆದಿದೆ.
ಸೋಮವಾರಪೇಟೆ ಹೋಬಳಿಯ ಹಾನಗಲ್ಲು ಗ್ರಾಮದ ರಾಜು ಅವರಿಗೆ ಸೇರಿದ ಜಾನುವಾರು ಮಳೆಗೆ ಸಿಲುಕಿ ಮೃತಪಟ್ಟಿದೆ.
ಮರ ಬಿದ್ದು ಕಾರ್ಮಿಕ ಸಾವು: ಮರ ಬಿದ್ದು ತೋಟದ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ಗುಹ್ಯ ಗ್ರಾಮದ ಕಕ್ಕಟಕಾಡು ನಿವಾಸಿ ಪ್ರಕಾಶ್(45) ಎಂಬವರೇ ಸಾವನ್ನಪ್ಪಿದವರಾಗಿದ್ದಾರೆ.
ಅಮ್ಮತ್ತಿ ಹೊಸಕೋಟೆ ಸಮೀಪದ ತೋಟವೊಂದರಲ್ಲಿ ಪ್ರಕಾಶ್ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಭಾರೀ ಗಾತ್ರದ ಮರವೊಂದು ಇವರ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆ. ಪ್ರಕಾಶ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕ ರಘು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ಅನಿಲ್ ಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!