ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಅರಿವು ಮೂಡಿಸಿ: ಡಾ.ಬಿ.ಸಿ.ಸತೀಶ್

ಹೊಸದಿಗಂತ ವರದಿ ಮಡಿಕೇರಿ:

ಮಳೆಗಾಲದಲ್ಲಿ ಡೆಂಗಿ ಜ್ವರ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಮಳೆಗಾಲದ ಸಂದರ್ಭದಲ್ಲಿ ಸೊಳ್ಳೆಗಳಿಂದ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಉತ್ಪತ್ತಿಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ನಿರ್ದೇಶನ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಾಜ ಕಲ್ಯಾಣ, ಮೀನುಗಾರಿಕೆ, ಕೈಗಾರಿಕೆ, ನೀರಾವರಿ, ಕಂದಾಯ, ಹೀಗೆ ಹಲವು ಇಲಾಖೆಗಳು ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಸೇರಿ ಅರಿವು ಮೂಡಿಸುವುದರ ಜೊತೆಗೆ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮಾತನಾಡಿ, ಮೇ 16 ರಂದು ರಾಷ್ಟ್ರೀಯ ಡೆಂಗಿ ದಿನವನ್ನು ಆಚರಿಸಲಾಗುತ್ತದೆ. ಜೂನ್ ತಿಂಗಳಲ್ಲಿ ಮಲೇರಿಯಾ ವಿರೋಧ ದಿನ ಆಚರಿಸಲಾಗುತ್ತಿದ್ದು, ಜುಲೈ ತಿಂಗಳಲ್ಲಿ ಡೆಂಗಿ ವಿರೋಧಿ ಮಾಸಾಚರಣೆ ನಡೆಯಲಿದೆ ಎಂದು ತಿಳಿಸಿದರು. ಕಳೆದ ನಾಲ್ಕು ತಿಂಗಳಲ್ಲಿ(ಜನವರಿಯಿಂದ ಏಪ್ರಿಲ್ ವರೆಗೆ) ಡೆಂಗ್ಯು ಜ್ವರದಿಂದ ಇಬ್ಬರು, ಮಲೇರಿಯಾದಿಂದ ಇಬ್ಬರು, ವಿಷಮಶೀತ ಜ್ವರದಿಂದ 7 ಮಂದಿ, ಡಯೇರಿಯಾದಿಂದ 1031 ಮಂದಿ, ನಾಯಿ ಕಡಿತದಿಂದ 2,223 ಮಂದಿ, ಹಾವು ಕಡಿತದಿಂದ 131, ಮತ್ತು ಇಲಿ ಜ್ವರದಿಂದ ನಾಲ್ಕು ಮಂದಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ಯಾವುದೇ ರೀತಿಯ ಮರಣ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದರು.

ಕುಡಿಯುವ ನೀರಿನ ಪರೀಕ್ಷೆ:

ಜಿಲ್ಲೆಯಲ್ಲಿ ಕುಡಿಯುವ ನೀರಿನ ಮೂಲಗಳ ಜೈವಿಕ ವಿಶ್ಲೇಷಣೆ ವರದಿ ಮಾಡಲಾಗುತ್ತಿದ್ದು, ಸುಮಾರು 3,934 ಕಡೆ ಕುಡಿಯುವ ನೀರು ಪರೀಕ್ಷೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಎಂಟೋಮಾಲಜಿಸ್ಟ್ ಮಂಜುನಾಥ್ ಅವರು, ಡೆಂಗಿ ಜ್ವರವು ಒಂದು ವೈರಾಣುವಿನಿಂದ ಹರಡುವ ರೋಗವಾಗಿದ್ದು, ಸೋಂಕು ಹೊಂದಿದ ಈಡೀಸ್ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜೊತೆಗೆ ಹಗಲು ವೇಳೆಯಲ್ಲಿ ಕಚ್ಚುತ್ತದೆ. ಹಾಗೆಯೇ ಸೋಂಕಿತ ಮನುಷ್ಯನನ್ನು ಕಚ್ಚಿದ 7 ರಿಂದ 8 ದಿನಗಳಲ್ಲಿ ಮತ್ತೆ ಮತ್ತೊಬ್ಬರಿಗೆ ಸೊಳ್ಳೆ ಕಚ್ಚಿದಾಗ ರೋಗ ಹರಡುತ್ತದೆ ಎಂದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಗೋಪಿನಾಥ್ ಅವರು, ನೀರಿನ ತೊಟ್ಟಿ, ಡ್ರಮ್ಮು, ಬ್ಯಾರಲ್, ಏರ್ ಕೂಲರ್ ಮತ್ತಿತರ ವಸ್ತುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳೆನೀರಿನ ಚಿಪ್ಪು, ಒಡೆದ ಬಾಟಲಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡಬೇಕು. ಮತ್ತಿತರ ಜಾಗೃತಿ ಅಗತ್ಯ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!