ರಾಜಸ್ಥಾನದ ರಾಜಕೀಯ ಬಿಕ್ಕಟ್ಟು: ಲಿಖಿತ ವರದಿ ಕೇಳಿದ ಸೋನಿಯಾ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ದೆಹಲಿ ಅಂಗಳ ತಲುಪಿದ್ದು, ಸಿಎಂ ಅಶೋಕ್ ಗೆಹ್ಲೋಟ್ ಬಣದ ಶಾಸಕರು ರಾಜೀನಾಮೆ ಪತ್ರ ನೀಡಿದ್ದರೆ, ಸ್ವತಃ ಗೆಹ್ಲೋಟ್ ಕೂಡ ಬಿಕ್ಕಟ್ಟು ನಿಭಾಯಿಸುವಲ್ಲಿ ಸೋಲು ಕಂಡಿದ್ದಾರೆ.

ಹೀಗಾಗಿ ಇದೀಗ ರಾಜಸ್ಥಾನ ಬಿಕ್ಕಟ್ಟಿನ ಬಗ್ಗೆ ಸ್ವತಃ ಸೋನಿಯಾ ಗಾಂಧಿ ಸಕ್ರಿಯವಾಗಿ ಕಣಕ್ಕಿಳಿದಿರುವ ಬಗ್ಗೆ ವರದಿಯಾಗಿದೆ. ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧಾರ ಮಾಡುವ ಸಲುವಾಗಿ ಪಕ್ಷದ ಹಿರಿಯ ನಾಯಕರಾದ ಅಜಯ್‌ ಮಾಕೆನ್‌ ಹಾಗೂ ಮಲ್ಲಿಕಾರ್ಜುನ್‌ ಖರ್ಗೆ ಜೈಪುರಕ್ಕೆ ತೆರಳಿದ್ದರು. ಆದರೆ, ಅಲ್ಲಿನ ಶಾಸಕಾಂಗ ಪಕ್ಷದೊಂದಿಗೆ ಯಾವುದೇ ಸಭೆ ನಡೆಸಲು ಸಾಧ್ಯವಾಗದೇ ದೆಹಲಿಗೆ ವಾಪಸಾಗಿದ್ದಾರೆ.

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಕುರಿತು ಸೋನಿಯಾ ಗಾಂಧಿ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಜಯ್‌ ಮಾಕೆನ್‌, ರಾಜಸ್ಥಾನದಲ್ಲಿ ಆದ ಬೆಳವಣಿಗೆ ಮಹತ್ವದ ವಿಚಾರಗಳನ್ನು ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೇನೆ ಎಂದರು.

ರಾಜಸ್ಥಾನದಲ್ಲಿ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಅಶೋಕ್ ಗೆಹ್ಲೋಟ್ ಅವರ ಸೂಚನೆಯ ಮೇರೆಗೆ ಕರೆಯಲಾಗಿತ್ತು ಎಂದು ಅಜಯ್ ಮಾಕನ್ ಹೇಳಿದ್ದಾರೆ. ನಾವು ಅಲ್ಲಿನ ಶಾಸಕರ ಜತೆ ಮಾತನಾಡಿ ಸೋನಿಯಾ ಗಾಂಧಿ ಅವರಿಗೆ ನಾವು ವರದಿ ನೀಡಬೇಕಿತ್ತು. ಆದರೆ, ಇದಕ್ಕೆ ಶಾಸಕರು ಷರತ್ತುಗಳನ್ನು ಹಾಕಿದ್ದು, ಅದನ್ನು ನಾವು ವಿರೋಧಿಸಿದ್ದೇವೆ. ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಮತ್ತು ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ನಂತರ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಜಯ್ ಮಾಕನ್ ಹೇಳಿದ್ದಾರೆ. ಇದು ಹಿತಾಸಕ್ತಿ ಸಂಘರ್ಷವಲ್ಲದಿದ್ದರೆ ಇನ್ನೇನು ಎಂದು ಹೇಳಿದರು.

ಷರತ್ತುಗಳನ್ನು ಯಾವುದೇ ಕಾರಣಕ್ಕೆ ವಿಧಿಸಲಾಗುವುದಿಲ್ಲ ಎಂದು ಅಜಯ್ ಮಾಕನ್ ಹೇಳಿದ್ದಾರೆ. ಇದು ಕಾಂಗ್ರೆಸ್ ಸಂಪ್ರದಾಯವಲ್ಲ. ಶಾಸಕರು ಮೂರು ಷರತ್ತುಗಳನ್ನು ಹಾಕಿದ್ದಾರೆ ಎಂದು ಹೇಳಿದರು. ಅಜಯ್ ಮಾಕನ್ ಪ್ರಕಾರ, ಅಕ್ಟೋಬರ್ 19 ರ ನಂತರ ಹೊಸ ಮುಖ್ಯಮಂತ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಶಾಸಕರ ಪರವಾಗಿ ಷರತ್ತು ಹಾಕಲಾಯಿತು, ಎರಡನೇ ಷರತ್ತು ಶಾಸಕರ ಗುಂಪಿನಲ್ಲಿಯೇ ಮಾತನಾಡಬೇಕು. ಪ್ರತಿಯೊಬ್ಬ ಶಾಸಕರೊಂದಿಗೆ ಮಾತನಾಡಬಾರದು ಮತ್ತು ಅಶೋಕ್ ಗೆಹ್ಲೋಟ್ ಅವರೇ ಇದನ್ನು ಹೇಳಿದ್ದಾರೆ ಎಂದರು.ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪಾಳೆಯದಿಂದಲೇ ಇರಬೇಕು ಎನ್ನುವುದು ಅವರ ಮೂರನೇ ಷರತ್ತು ಎಂದು ಅಜಯ್ ಮಾಕೆನ್ ಹೇಳಿದ್ದಾರೆ.

ಇಡೀ ಘಟನೆಯ ಬಗ್ಗೆ ನಾವು ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದರು. ಲಿಖಿತವಾಗಿ ವಿವರವಾದ ವರದಿ ನೀಡುವಂತೆ ಸೋನಿಯಾ ಗಾಂಧಿ ಕೇಳಿದ್ದಾರೆ. ನಾಳೆ ಬೆಳಗಿನ ವೇಳೆಗೆ, ಸೋನಿಯಾ ಗಾಂಧಿ ಅವರಿಗೆ ಲಿಖಿತ ವರದಿಯನ್ನು ನೀಡುತ್ತೇವೆ ಎಂದರು.

ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹೊರಬಿದ್ದ ಗೆಹ್ಲೋಟ್?

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಪಕ್ಷದ ಮುಂದಿನ ಅಧ್ಯಕ್ಷರ ರೇಸ್‌ನಲ್ಲಿ ಅಶೋಕ್ ಗೆಹ್ಲೋಟ್ ಅವರನ್ನು ಪರಿಗಣಿಸಲಾಗಿದೆ. ಅಶೋಕ್ ಗೆಹ್ಲೋಟ್ ಅವರನ್ನು ಗಾಂಧಿ ಕುಟುಂಬದ ನಿಕಟವರ್ತಿ ಎಂದು ಪರಿಗಣಿಸಲಾಗಿದ್ದು, ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಉದಯಪುರ ಘೋಷಣೆ ಮುಂದಿನ ಅಧ್ಯಕ್ಷರಿಗೂ ಅನ್ವಯವಾಗಲಿದೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದರು. ಇದೀಗ ರಾಜಸ್ಥಾನದ ಇತ್ತೀಚಿನ ಬಿಕ್ಕಟ್ಟಿನ ನಂತರ ಅಶೋಕ್ ಗೆಹ್ಲೋಟ್ ಅವರು ಮುಂದಿನ ಕಾಂಗ್ರೆಸ್ ಅಧ್ಯಕ್ಷರ ರೇಸ್‌ನಿಂದ ಹೊರಗುಳಿಯಬಹುದು ಎಂಬ ವರದಿಗಳು ಸಹ ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!