ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ಹಾಗೂ ನಟ ಧನುಷ್ ಅವರು ಕೋರ್ಟ್ನಿಂದ ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದಾರೆ. ಧನುಷ್ ಹಾಗೂ ಐಶ್ವರ್ಯಾಗೆ ವಿಚ್ಛೇದನ ನೀಡಿ ಚೆನ್ನೈ ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ.
ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಪರಸ್ಪರ ಪ್ರೀತಿಸಿ 2004ರಲ್ಲಿ ವಿವಾಹವಾದರು. ಈ ದಂಪತಿಗೆ ಲಿಂಗ ಮತ್ತು ಯಾತ್ರಾ ಎಂಬ ಇಬ್ಬರು ಮಕ್ಕಳಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್ ಜೋಡಿಯಾಗಿದ್ದ ಇವರಿಬ್ಬರು 20 ವರ್ಷಗಳ ದಾಂಪತ್ಯದ ನಂತರ ಭಿನ್ನಾಭಿಪ್ರಾಯಗಳಿಂದ ದೂರವಾಗಲು ನಿರ್ಧರಿಸಿದ್ದಾರೆ. 2022ರಲ್ಲೇ ಪ್ರತ್ಯೇಕತೆಯನ್ನು ಅಧಿಕೃತವಾಗಿ ಘೋಷಿಸಿದ್ರು. ಇದೀಗ ಕೋರ್ಟ್ ಮೂಲಕ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.
ಇಬ್ಬರೂ ತಮ್ಮ ವೈವಾಹಿಕ ಜೀವನವನ್ನು ಅಂತ್ಯಗೊಳಿಸಲು ಪರಸ್ಪರ ವಿಚ್ಛೇದನಕ್ಕಾಗಿ ಚೆನ್ನೈ ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 2004ರಲ್ಲಿ ನಡೆದ ತಮ್ಮ ಮದುವೆಯನ್ನು ಅನೂರ್ಜಿತಗೊಳಿಸುವಂತೆ ಕೋರ್ಟ್ ಬಳಿ ಮನವಿ ಮಾಡಿದ್ದಾರೆ.
ಪ್ರಧಾನ ಕುಟುಂಬ ಕಲ್ಯಾಣ ನ್ಯಾಯಾಲಯದ ನ್ಯಾಯಾಧೀಶೆ ಸುಭಾದೇವಿ ಅವರ ಮುಂದೆ ಅರ್ಜಿಯ ವಿಚಾರಣೆ ನಡೆಯಿತು. ಆರಂಭದಲ್ಲಿ ಇಬ್ಬರಿಗೂ ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತಾದರೂ ವಿಚಾರಣೆಯನ್ನು ಮುಂದೂಡಲಾಗಿತ್ತು. ಪ್ರಕರಣವು ಮತ್ತೆ ವಿಚಾರಣೆಗೆ ಬಂದಾಗ, ಇಬ್ಬರು ಮೂರು ಬಾರಿ ವಿಚಾರಣೆಗಳಿಗೆ ಹಾಜರಾಗಲಿಲ್ಲ. ನವೆಂಬರ್ 21ರಂದು ನಟ ಧನುಷ್ ಮತ್ತು ಐಶ್ವರ್ಯ ಇಬ್ಬರೂ ಖುದ್ದು ವಿಚಾರಣೆಗೆ ಹಾಜರಾಗಿದ್ದರು.
ಇಬ್ಬರೂ ಪರಸ್ಪರ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ ಎಂದು ಕೋರ್ಟ್ ಮುಂದೆ ಹೇಳಿದರು. ನಂತರ ಇಬ್ಬರೂ ನ್ಯಾಯಾಲಯದ ದಾಖಲೆಗಳಿಗೆ ಸಹಿ ಹಾಕಿದರು. ಇಂದು (ನ.27) ಈ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶೆ ಸುಭಾದೇವಿ, ಇಬ್ಬರಿಗೂ ವಿಚ್ಛೇದನ ನೀಡಿ 2004ರ ನ.18ರಂದು ನಡೆದ ವಿವಾಹ ನೋಂದಣಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಐಶ್ವರ್ಯಾ-ಧನುಷ್ ಅವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ತಮ್ಮ ಮಕ್ಕಳ ಪಾಲನೆಯ ಬಗ್ಗೆಯೂ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮಕ್ಕಳ ಹೊಣೆಯನ್ನು ಐಶ್ವರ್ಯಾ ತೆಗೆದುಕೊಳ್ಳಲಿದ್ದಾರೆ. ಇದಕ್ಕೆ ನಟ ಧನುಷ್ ಕೂಡ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ನಾನು ಮಕ್ಕಳಿಗಾಗಿ ಅವರ ಜೊತೆ ಇದ್ದೇ ಇರುತ್ತೇನೆ ಎಂದಿದ್ದಾರಂತೆ. ವಿಚ್ಛೇದನ ಪ್ರಕ್ರಿಯೆಯು ಸುಗಮವಾಗಿ ನಡೆಯಲು ತಮ್ಮ ಮಕ್ಕಳೊಂದಿಗೆ ಇಬ್ಬರು ಭಾರೀ ಚರ್ಚೆ ಕೂಡ ಮಾಡಿದ್ದಾರೆ ಎನ್ನಲಾಗ್ತಿದೆ.