ಅಜ್ಮೀರ್ ದರ್ಗಾದ ಮುಂದೆ ಶಿವ ದೇವಾಲಯ ವಾದ: ಅರ್ಜಿ ವಿಚಾರಣೆಗೆ ಪರಿಗಣಿಸಿದ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಶಿ, ಮಥುರಾ ಮತ್ತು ಸಂಭಾಲ್​​​ನ ಜಾಮಾ ಮಸೀದಿಯ ನಂತರ ಅಜ್ಮೀರ್​​ ನಗರದ ಖ್ವಾಜಾ ಗರೀಬ್ ನವಾಜ್ ಅವರ ದರ್ಗಾದ ಮುಂದೆ ಶಿವ ದೇವಾಲಯವಿದೆ ಎಂಬ ದೂರನ್ನು ಸಿವಿಲ್ ಕೋರ್ಟ್ (ಪಶ್ಚಿಮ) ನ್ಯಾಯಾಧೀಶ ಮನಮೋಹನ್ ಚಂದೇಲ್ ಅವರು ಸ್ವೀಕರಿಸಿದ್ದಾರೆ. ಈ ಮೂಲಕ ನ್ಯಾಯಾಲಯವು ಈ ಪ್ರಕರಣವನ್ನು ವಿಚಾರಣೆಗೆ ಯೋಗ್ಯವೆಂದು ಪರಿಗಣಿಸಿದೆ.

ದರ್ಗಾದ ಎಎಸ್‌ಐ ಸರ್ವೆ ನಡೆಸುವಂತೆ ಆಗ್ರಹ ಕೇಳಿಬಂದಿದ್ದು, ಅಜ್ಮೀರ್ ದರ್ಗಾ ಈ ಹಿಂದೆ ಶಿವಾಲಯವಾಗಿತ್ತೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬಹುದು ಎನ್ನಲಾಗಿದೆ. ಇನ್ನು ಬುಧವಾರದ ವಿಚಾರಣೆ ನಂತರ ನ್ಯಾಯಾಲಯ ನೋಟಿಸ್ ಸೂಚನೆಗಳನ್ನು ನೀಡಿದೆ.

ನ್ಯಾಯಾಲಯದ ಆದೇಶದ ಪ್ರಕಾರ ಅಜ್ಮೀರ್ ದರ್ಗಾ ಸಮಿತಿ, ಅಲ್ಪಸಂಖ್ಯಾತ ಇಲಾಖೆ ಮತ್ತು ಎಎಸ್‌ಐ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ .

ಹಿಂದು ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ವಕೀಲರಾದ ರಾಮ್ನಿವಾಸ್ ಬಿಷ್ಣೋಯ್ ಮತ್ತು ಈಶ್ವರ್ ಸಿಂಗ್ ಮೂಲಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ವಾಸ್ತವವಾಗಿ, ಅಜ್ಮೀರ್ ಖ್ವಾಜಾ ಗರೀಬ್ ನವಾಜ್ ದರ್ಗಾವನ್ನು ಸಂಕಟ್ ಮೋಚನ್ ಶಿವ ದೇವಾಲಯ ಎಂದು ಹೇಳಿಕೊಳ್ಳುವ ಪ್ರಕರಣವನ್ನು ಇಂದು ಅಜ್ಮೀರ್ ಸಿವಿಲ್ ಕೋರ್ಟ್ (ವೆಸ್ಟ್‌)ನಲ್ಲಿ ಚರ್ಚಿಸಲಾಯಿತು.

ನ್ಯಾಯಾಲಯದಲ್ಲಿ ನಡೆದ ಚರ್ಚೆಯ ವೇಳೆ, ಶಿವನ ಬಾಲ ರೂಪದ ಪರವಾಗಿ ವಕೀಲರಾದ ರಾಮಸ್ವರೂಪ್ ಬಿಷ್ಣೋಯ್ ಮತ್ತು ಈಶ್ವರ್ ಸಿಂಗ್ ಅವರು ವಾದ ಮಂಡಿಸಿದರು. ದರ್ಗಾಕ್ಕಿಂತ ಮೊದಲು ಇಲ್ಲಿ ಶಿವನ ದೇಗುಲವಿತ್ತು ಎಂದು ಹೇಳಲಾಗಿದ್ದು, ಹಲವು ಸಾಕ್ಷ್ಯಗಳನ್ನು ದಾಖಲೆಗಳ ರೂಪದಲ್ಲಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ಕೋರ್ಟ್ ಮುಂದಿನ ವಿಚಾರಣೆಯನ್ನು ನವೆಂಬರ್ 27ಕ್ಕೆ ನಿಗದಿಪಡಿಸಿತ್ತು. ಹಿಂದು ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಅಜ್ಮೀರ್‌ನ ದರ್ಗಾ ಹಿಂದೆ ಹಿಂದು ಸಂಕಟ್ ಮೋಚನ್ ದೇವಾಲಯವಾಗಿತ್ತು ಎಂದು ಪ್ರತಿಪಾದಿಸಿದ್ದಾರೆ ಮತ್ತು ಅವರು ಇದಕ್ಕೆ ಬೆಂಬಲವಾಗಿ ದಾಖಲೆಗಳು ಮತ್ತು ಹಲವು ಪುರಾವೆಗಳನ್ನು ಸಹ ಪ್ರಸ್ತುತಪಡಿಸಿದ್ದಾರೆ. 1910 ರಲ್ಲಿ ಪ್ರಕಟವಾದ ಹರ್ ವಿಲಾಸ್ ಶಾರದಾ ಅವರ ಪುಸ್ತಕದಲ್ಲಿ ಈ ದೇವಾಲಯವನ್ನು ಉಲ್ಲೇಖಿಸಲಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ಧಾರೆ.ಗುಪ್ತಾ ಅವರು ನ್ಯಾಯಾಲಯದಲ್ಲಿ ಇತರ ವಿವಿಧ ದಾಖಲೆಗಳನ್ನು ಮಂಡಿಸಿದರು ಮತ್ತು ಅಜ್ಮೀರ್ ದರ್ಗಾವನ್ನು ಸರ್ವೆ ಮಾಡಿ ಅದರ ಮಾನ್ಯತೆಯನ್ನು ರದ್ದುಗೊಳಿಸಬೇಕು ಮತ್ತು ಹಿಂದು ಸಮುದಾಯಕ್ಕೆ ಇಲ್ಲಿ ಪೂಜೆ ಮಾಡುವ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!