ರಾಮ ಮಂದಿರದಲ್ಲಿ ಅದ್ಧೂರಿ ಜನ್ಮೋತ್ಸವ ಆಚರಣೆ: ಮೊದಲ ಬಾರಿ ಜನ್ಮಭೂಮಿಯಿಂದ ನೇರಪ್ರಸಾರ

ಹೊಸದಿಗಂತ ಡಿಜಿಟಲ್ ಡೆಸ್ಕ್ 
ಅಯೋಧ್ಯೆ: ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯಲ್ಲಿ ಸುಮಾರು ಐದು ಶತಮಾನಗಳ ನಂತರ ರಾಮಲಲ್ಲಾನ ಜನ್ಮೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಶ್ರೀ ರಾಮ ಜನ್ಮಭೂಮಿಯ ತಾತ್ಕಾಲಿಕ ಮಂದಿರದಲ್ಲಿ ಕುಳಿತಿರುವ ರಾಮ ಲಲ್ಲಾಗೆ ಒಂದು ಕ್ವಿಂಟಾಲ್ ಪಂಚಾಮೃತದಿಂದ ಅಭಿಷೇಕ ಮಾಡಲಾಯಿತು. ಜೊತೆಹೆ 56 ಭೋಗ್ (ನೈವೇದ್ಯ) ಅರ್ಪಿಸಿ, ಎರಡುವರೆ ಕ್ವಿಂಟಾಲ್ ಪಂಜೀರಿ ಮಾಡಲಾಗಿತ್ತು.
ಭಾನುವಾರ ಅಯೋಧ್ಯೆಯಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಭಕ್ತರು ರಾಮಲಲ್ಲಾನ  ಜನ್ಮದಿನದ ಸಂಭ್ರಮದಲ್ಲಿ ಮಿಂದೆದ್ದರು. ಕೋಟ್ಯಂತರ ಮಂದಿ ಶ್ರೀರಾಮ ಜನ್ಮಭೂಮಿಯಿಂದ ಮೊದಲ ಬಾರಿಗೆ ದೂರದರ್ಶನದಲ್ಲಿ ಶ್ರೀರಾಮ ಜನ್ಮೋತ್ಸವದ ನೇರ ಪ್ರಸಾರವನ್ನು ಸಹ ವೀಕ್ಷಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದಿಂದ ವರ್ಚುವಲ್ ಮೂಲಕ ಅಯೋಧ್ಯೆಯ ರಾಮಜನ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಗೋರಖ್‌ಪುರದಲ್ಲಿ ಕನ್ಯಾ ಪೂಜೆಯ ನಂತರ ಮಧ್ಯಾಹ್ನ 12 ಗಂಟೆಗೆ, ಮುಖ್ಯಮಂತ್ರಿ ಯೋಗಿ ಅವರು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಜನ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಗೋರಖನಾಥ ಮಂದಿರಕ್ಕೆ ಆಗಮಿಸಿದರು. ಜನ್ಮಭೂಮಿ ರಾಮ ಮಂದಿರ ನಿರ್ಮಾಣ ಹಾಗೂ ಅಯೋಧ್ಯೆಯ ಅಭಿವೃದ್ಧಿಯನ್ನು ಕೈಗೊಳ್ಳುತ್ತಿರುವಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮನವಮಿಯಂದು ಮೊದಲ ಬಾರಿಗೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಿಂದ ದೂರದರ್ಶನದಲ್ಲಿ ರಾಮ ಜನ್ಮೋತ್ಸವವನ್ನು ನೇರ ಪ್ರಸಾರ ಮಾಡಲು ಸೂಚಿಸಿದರು ಅದರಂತೆ ದೂರದರ್ಶನದ ಮೂರು ವಾಹಿನಿಗಳಿಂದ ನೇರ ಪ್ರಸಾರ ಮಾಡಲಾಯಿತು. ಹಲವಾರು ವಾಹಿನಿಗಳು, ಸಾಮಾಜಿಕ ಜಾಲತಾಣಗಳು ದೂರದರ್ಶನದಿಂದ ಲಿಂಕ್ ಪಡೆದು ಪ್ರಸಾರ ಮಾಡಿದವು.
ಕೊರೋನಾ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ಶ್ರೀರಾಮನ ಜನ್ಮೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ನಡೆಸಲಾಗಿತ್ತು. ಈ ಬಾರಿ ವಿಜ್ರಂಭಣೆಯಿಂದ ರಾಮ ಜನ್ಮೋತ್ಸವ ಆಚರಿಸಿದ್ದು, ಮಂದಿರವನ್ನು ಹೂವುಗಳಿಂದ ಶೃಂಗರಿಸಲಾಯಿತು. ರಾಮಲಲ್ಲಾ ಜೊತೆಗೆ ಲಕ್ಷ್ಮಣ, ಭರತ್, ಶತ್ರುಘ್ನ ಮತ್ತು ಹನುಮಂತ ದೇವರಿಗೆ ಹಳದಿ ವಸ್ತ್ರದ ಜೊತೆಗೆ ಚಿನ್ನದ ಕಿರೀಟ ಹಾಗೂ ಆಭರಣಗಳಿಂದ ಅಲಂಕರಿಸಲಾಯಿತು. ರಾಮಲಲ್ಲಾಗೆ ಸಮರ್ಪಿಸಿದ ನೈವೇದ್ಯವನ್ನು ದರ್ಶನಕ್ಕೆ ಬಂದ ಭಕ್ತರಿಗೆ ವಿತರಿಸಲಾಯಿತು.
ಅಯೋಧ್ಯೆ ನಗರಿ ಸಂಪೂರ್ಣವಾಗಿ ರಾಮಭಕ್ತರಿಂದ ತುಂಬಿ ತುಳುಕುತ್ತಿದ್ದು, ಬೆಳಗ್ಗೆ ಸರಯೂ ನದಿಯಲ್ಲಿ ಪವಿತ್ರ ಸ್ನಾನಗೈದ ನಂತರ, ರಾಮ ಜನ್ಮಭೂಮಿ ಮಂದಿರಕ್ಕೆ ತೆರಳಿ, ದೇವರ ದರ್ಶನ ಪಡೆದರು. ಕನಕ ಮಂದಿರ, ದಶರಥ ಮಹಲ್ ಸಹಿತ ಎಲ್ಲ ದೇವಾಲಯಗಳಲ್ಲಿಯೂ ಭಕ್ತರ ನೂಕು ನುಗ್ಗಲು ಹೆಚ್ಚಾಗಿತ್ತು. ನಗರದಾದ್ಯಂತ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!