ರಾಮನಗರ ಸರಕಾರಿ ಎಂಜಿನಿಯರಿಂಗ್ ಕಾಲೇಜು: ಶೀಘ್ರ ಕಾಮಗಾರಿ ಮುಗಿಸಲು ಸಚಿವರ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ರಾಮನಗರದಲ್ಲಿ ₹ 73 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ಬಾಕಿ‌ ಕಾಮಗಾರಿಯನ್ನು ಜೂನ್ ಹೊತ್ತಿಗೆ ಸಂಪೂರ್ಣ ಮುಗಿಸಬೇಕು ಎಂದು ಆ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಬಂಧ ತಮ್ಮ ಅಧ್ಯಕ್ಷತೆಯಲ್ಲಿ ಬುಧವಾರದಂದು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವ ಜಾನಪದ ಲೋಕದ ಬಳಿ ನಿರ್ಮಾಣವಾಗುತ್ತಿರುವ ಕ್ಯಾಂಪಸ್ ಅನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳಿಗೆ ಅಗತ್ಯವಾದ ಸುಸಜ್ಜಿತ ಹಾಸ್ಟೆಲ್, ಪ್ರಯೋಗಾಲಯ, ತರಗತಿಗಳು, ಗ್ರಂಥಾಲಯ, ನೀರು ಮತ್ತು ಒಳಚರಂಡಿ ಸೌಲಭ್ಯಗಳು, ವಾಕ್ಪಥಗಳು ಇತ್ಯಾದಿಗಳೆಲ್ಲ ಕಡ್ಡಾಯವಾಗಿ ಇರಬೇಕು. ಇದರ ಜತೆಗೆ ಕ್ಯಾಂಪಸ್ ಆಕರ್ಷಕವಾಗಿದ್ದು, ಅತ್ಯಂತ ಸುಸಜ್ಜಿತವಾಗಿ ಹೈಟೆಕ್ ದರ್ಜೆಯ ಕ್ಯಾಂಪಸ್ ಆಗಿ ತಲೆಯೆತ್ತಬೇಕು. 2022-23ನೇ ಶೈಕ್ಷಣಿಕ ಸಾಲಿನ ತರಗತಿಗಳು ಹೊಸ ಕ್ಯಾಂಪಸ್ಸಿನಲ್ಲೇ ನಡೆಯುವಂತಾಗಬೇಕು ಎಂದು ಅವರು ನಿರ್ದೇಶಿಸಿದ್ದಾರೆ.

ಈ ಕಾಲೇಜಿನಲ್ಲಿ ರಾಮನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ವೃತ್ತಿಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆ ಇದ್ದು, ಸ್ಥಳೀಯ ಸಮುದಾಯಕ್ಕೆ ಇದರ ಲಾಭ ದೊರಕುವಂತಾಗಬೇಕು ಎಂದು ಸಚಿವರು ಹೇಳಿದ್ದಾರೆ.

ಸಭೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ರಾಮನಗರ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್ ಗೋಪಾಲ್ ಮತ್ತಿತರ ಅಧಿಕಾರಿಗಳು ಇದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!