ಹೊಸದಿಗಂತ ವರದಿ, ಮೇಲುಕೋಟೆ :
ರಾಮಾನುಜ ಸಹಸ್ರಮಾನೋತ್ಸವ ಭವನ ನಿರ್ಮಾಣದ 3 ನೇ ವಾರ್ಷಿಕೋತ್ಸವ ಸಂಭ್ರಮಕ್ಕಾಗಿ ಮೇಲುಕೋಟೆಯ ಕಲ್ಯಾಣಿ ಬಳಿಯ ಅನ್ನದಾನ ಉಡೆಯರ್ ಶ್ರೀಮಠದ ಶ್ರೀನಿವಾಸನಿಗೆ ಭಾನುವಾರ ಕಲ್ಯಾಣೋತ್ಸವ ವೈಭವದಿಂದ ನೆರವೇರಿತು.
ಕಲ್ಯಾಣೋತ್ಸವದ ಅಂಗವಾಗಿ ದೇವಾಲಯದಲ್ಲಿ ಶನಿವಾರ ಮತ್ತು ಭಾನುವಾರ ಧಾರ್ಮಿಕ ಕೈಂಕರ್ಯಗಳು ನೆರವೇರಿದವು ಬೆಳಿಗ್ಗೆ ಪುಣ್ಯಾಹವಾಚನ, ವಿಶ್ವಕ್ಷೇನಾರಾಧನ, 108 ಕಲಸ ಆರಾಧನೆ ನಡೆದ ನಂತರ ಕೊರೋರ ನಿರ್ಮೂಲನೆ ಮತ್ತು ಲೋಕಕಲ್ಯಾಣಾರ್ಥವಾಗಿ ಮಹಾಸುದರ್ಶನ ಹೋಮ ನೆರವೇರಿಸಲಾಯಿತು. ಹೋಮದ ಪೂರ್ಣಾಹುತಿಯ ನಂತರ ರಾಮಾನುಜ ಸಹಸ್ರಮಾನೋತ್ಸವ ಭವನದಲ್ಲಿ ಭೂನೀಳಾ ಸಮೇತ ಶ್ರೀನಿವಾಸಸ್ವಾಮಿಗೆ ವೈಭವದಿಂದ ಕಲ್ಯಾಣೋತ್ಸವ ನೆರವೇರಿಸಲಾಯಿತು.
ಪ್ರಾತಃ ಕಾಲ ಕಲ್ಯಾಣೋತ್ಸವದ ಅಂಗವಾಗಿ ಮೂಲಮೂರ್ತಿ ಮತ್ತು ಉತ್ಸವಮೂರ್ತಿಗೆ ಮಹಾಭಿಷೇಕ ನೆರವೇರಿಸಲಾಯಿತು. ಮೂಲಮೂರ್ತಿ ವೆಂಕಟೇಶ್ವರನಿಗೆ ಭವ್ಯವಾಗಿ ಅಲಂಕಾರ ಮಾಡಲಾಗಿತ್ತು. ಕಲ್ಯಾಣೋತ್ಸವದಲ್ಲಿ ಕಾರ್ಯದರ್ಶಿ ನಾರಾಯಣಮೂರ್ತಿ, ಅಧ್ಯಕ್ಷೆ ಶಾಂತಮ್ಮ, ರಾಘವಾಚಾರ್, ರಾಜಣ್ಣ ರಾಜಗೋಪಾಲ್, ಪಾರ್ಥಸಾರಥಿ, ಯದುಶೈಲಸಂಪತ್ತು, ಭಾಗವಹಿಸಿದ್ದರು. ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸೇರಿದಂತೆ ನೂರಾರು ಭಕ್ತರು ಕಲ್ಯಾಣೋತ್ಸವದಲ್ಲಿ ಭಾಗಿಯಾಗಿ ದೇವರದರ್ಶನದೊಂದಿಗೆ ತೀರ್ಥಪ್ರಸಾದ ಸ್ವೀಕರಿಸಿದರು.