ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣ್ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಭಾರತೀಯ ಚಿತ್ರರಂಗದ ಮೋಸ್ಟ್ ಅವೈಟೆಡ್ ಸಿನಿಮಾ. ದೇಶದ ಅತ್ಯಂತ ದುಬಾರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞರು ಸಾಥ್ ನೀಡಿದ್ದು, ಗುಣಮಟ್ಟದ ಮೇಲೆ ಭಾರಿ ನಿರೀಕ್ಷೆಗಳಿವೆ. ಸದ್ಯ ಚಿತ್ರತಂಡವು ಸಿನಿಮಾದ ಭರ್ಜರಿ ಟ್ರೈಲರ್ ಬಿಡುಗಡೆ ಮಾಡಲು ಸಂಪೂರ್ಣ ಸಜ್ಜಾಗಿದೆ.
ಸೆನ್ಸಾರ್ ಅಂಗಳದಲ್ಲಿ ಸಿಕ್ಕಿತು ‘U’ ಸರ್ಟಿಫಿಕೇಟ್
ಚಿತ್ರಮಂದಿರಗಳಲ್ಲಿ ಜಾಹೀರಾತು ರೂಪದಲ್ಲಿ ಟ್ರೈಲರ್ ಪ್ರದರ್ಶಿಸಲು ಸೆನ್ಸಾರ್ ಮಂಡಳಿಯ ಅನುಮತಿ ಕಡ್ಡಾಯವಾಗಿದೆ. ಇದೀಗ ‘ರಾಮಾಯಣ’ ಚಿತ್ರತಂಡವು ಸೆನ್ಸಾರ್ ಮಂಡಳಿಯಿಂದ ಅಧಿಕೃತವಾಗಿ ‘ಯು’ (U) ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಇದರಿಂದಾಗಿ ಈ ಬಹುನಿರೀಕ್ಷಿತ ಸಿನಿಮಾದ ಟ್ರೈಲರ್ ಶೀಘ್ರದಲ್ಲೇ ಚಿತ್ರಮಂದಿರಗಳ ಬೆಳ್ಳಿಪರದೆಯ ಮೇಲೆ ಪ್ರದರ್ಶನಗೊಳ್ಳುವುದು ಖಚಿತವಾಗಿದೆ.
4 ನಿಮಿಷಗಳ ದೃಶ್ಯ ವೈಭವದ ಟ್ವಿನ್ ಟ್ರೈಲರ್
CBFC ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಚಿತ್ರತಂಡವು ಒಟ್ಟು ಎರಡು 3D ಟ್ರೈಲರ್‌ಗಳನ್ನು ಸೆನ್ಸಾರ್ ಮಾಡಿಸಿದೆ. ಮೊದಲನೆಯದು 4 ನಿಮಿಷ 15 ಸೆಕೆಂಡುಗಳ ಅವಧಿಯ ‘ಟ್ರೈಲರ್ – ರಾಮಾಯಣ 3D’ ಆಗಿದ್ದರೆ, ಎರಡನೆಯದು 4 ನಿಮಿಷಗಳ ಅವಧಿಯ ‘ಥಿಯೇಟ್ರಿಕಲ್ ಟ್ರೈಲರ್ – ರಾಮಾಯಣ 3D’ ಆಗಿದೆ.
ಟೀಸರ್ ಮೂಲಕ ಮೂಡಿದ್ದ ಕುತೂಹಲ
ಕಳೆದ ವರ್ಷ ಜುಲೈನಲ್ಲಿ ಚಿತ್ರದ ಮೊದಲ ಸಣ್ಣ ಝಲಕ್ ಹೊರಬಂದಿತ್ತು. ತದನಂತರ ಈ ವರ್ಷದ ಹನುಮ ಜಯಂತಿಯಂದು ರಣಬೀರ್ ಕಪೂರ್ ಅವರ ಶ್ರೀರಾಮನ ಪಾತ್ರದ 2 ನಿಮಿಷ 38 ಸೆಕೆಂಡುಗಳ ‘ರಾಮ’ ಟೀಸರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಅದಕ್ಕೂ ಸಹ ‘U’ ಪ್ರಮಾಣಪತ್ರ ಸಿಕ್ಕಿತ್ತು. ಈಗ 4 ನಿಮಿಷಗಳ ಬೃಹತ್ ಟ್ರೈಲರ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.



