ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಎನ್‌ಐಎ ಯಿಂದ ಇನ್ನಷ್ಟು ಮಾಹಿತಿ ಬಹಿರಂಗ!

ಹೊಸದಿಗಂತ ವರದಿ,ಬೆಂಗಳೂರು:

ಬೆಂಗಳೂರು ನಗರದ ಬ್ರೂಕ್‌ಫೀಲ್ಡ್ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಮುಜಾಮಿಲ್ ಶರೀಫ್, ಶಿವಮೊಗ್ಗದ ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹ ನೀಡಿದ ಸೂಚನೆ ಮೇರೆಗೆ ಇನ್ನೂ ಕೆಲ ಸಂಘಟನೆಗಳೊಂದಿಗೆ ಕೈಜೋಡಿಸಿ ರಾಜ್ಯದ ಕೆಲ ಪ್ರಮುಖ ಸ್ಥಳಗಳಲ್ಲಿ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದರು ಎಂಬ ವಿಚಾರ ರಾಷ್ಟ್ರೀಯ ತನಿಖೆ ದಳ(ಎನ್‌ಐಎ)ದ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆಯಲ್ಲಿ ತಿಳಿದುಬಂದಿದೆ.

ತಲೆಮರೆಸಿಕೊಂಡಿರುವ ಶಂಕಿತ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹಾ ಜತೆಗೆ ಮುಜಾಮಿಲ್ ಶರೀಫ್‌ಗೆ ನಗರದಲ್ಲಿ ಗೊತ್ತಿರುವ ಹಲವು ಪ್ರತಿಷ್ಠಿತ ಹೊಟೇಲ್ ಗಳು, ಪ್ರಮುಖ ಸ್ಥಳಗಳ ಬಗ್ಗೆ ಪರಿಚಯವಿರುವ ಬಗ್ಗೆ ಬಹಳ ಚರ್ಚೆ ಮಾಡುತ್ತಿದ್ದನು. ಆ ವೇಳೆ ಎಲ್ಲಿ ಬಾಂಬ್ ಇಡಬಹುದು ಎಂಬುದರ ಕುರಿತು ಪರಸ್ಪರ ಮಾತನಾಡಿಕೊಂಡಿದ್ದರು ಎಂಬುದು ಮೂಲಗಳಿಂದ ಗೊತ್ತಾಗಿದೆ. ಹಾಗಾಗಿ ಎನ್‌ಐಎ ಅಧಿಕಾರಿಗಳು ವಿಚಾರಣೆಯನ್ನು ಮತ್ತಷ್ಟು ತೀವ್ರ ಹಂತದಲ್ಲಿ ನಡೆಸುತ್ತಿದ್ದಾರೆ.

ಐಸಿಸ್‌ನ ಕಮಾಂಡ್‌ಗಳ ಜತೆಗೆ ಸಂಪರ್ಕ
ಆರೋಪಿ ಮುಜಾಮಿಲ್ ಶರೀಫ್‌ನ ಮೊಬೈಲ್‌ನ್ನು ವಶಕ್ಕೆ ಪಡೆದು ಪ್ರತಿಯೊಂದು ಚಾಟ್ ಹಾಗೂ ಡಾಟಾ ಮಾಹಿತಿಗಳನ್ನು ಕಲೆಹಾಕುತ್ತಿರುವ ಎನ್‌ಐಎ ಅಧಿಕಾರಿಗಳು, ಎಂಡ್ ಟು ಎಂಡ್ ಎನ್ಕ್ರಿಪ್ಟ್ ಆ್ಯಪ್‌ಗಳ ಮೂಲಕ ಐಸಿಸ್‌ನ ಕಮಾಂಡ್‌ಗಳ ಜತೆಗೆ ಸಂಪರ್ಕ ಹೊಂದಿದ್ದನು ಎಂಬ ಮಾಹಿತಿ ಸಿಕ್ಕಿರುವುದಾಗಿ ಮೂಲಗಳು ತಿಳಿಸಿವೆ. ಆದರೆ, ಆರೋಪಿಯು ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಾಯಿಬಿಡುತ್ತಿಲ್ಲ ಎಂದು ತಿಳಿಸಿದೆ.

ಇನ್ನು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಾಂಬ್‌ನ್ನು ಮುಜಾಮಿಲ್ ಶರೀಫ್ ಸಮ್ಮುಖದಲ್ಲಿ ಆರೋಪಿ ಮೊಹಮ್ಮದ್ ಶಾರೀಕ್ ತಯಾರಿಸಿದ್ದ ಎಂಬುದು ಗೊತ್ತಾಗಿದ್ದು, ಶಂಕಿತನ ಮನೆ ಹಾಗೂ ತಲೆಮರೆಸಿಕೊಂಡಿರುವ ಶಂಕಿತರು ಭೇಟಿಯಾದ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಲಾಗುತ್ತಿದೆ. ಹಾಗೂ ತಲೆಮರೆಸಿಕೊಂಡಿರುವ ಶಂಕಿತರಿಗಾಗಿ ತೀವ್ರ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!