ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಪಡೆ ಆಂಗ್ಲರ ವಿರುದ್ಧ ಪ್ರಾಬಲ್ಯ ಸಾಧಿಸಿದೆ.
ಇಂಗ್ಲೆಂಡ್ ತಂಡ ಭಾರತ ತಂಡಕ್ಕೆ ಗೆಲ್ಲಲು 249 ರನ್ಗಳ ಸಾಧಾರಣ ಗುರಿ ನೀಡಿದೆ. ಭಾರತದ ಪರ ಪದಾರ್ಪಣೆ ವೇಗಿ ಹರ್ಷಿತ್ ರಾಣಾ ಹಾಗೂ ಅನುಭವಿ ಜಡೇಜಾ 3 ವಿಕೆಟ್ ಪಡೆದರೆ, ಇಂಗ್ಲೆಂಡ್ ಪರ ಬಟ್ಲರ್ 52 ರನ್ ಹಾಗೂ ಬೆಥೆಲ್ 51 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಫಿಲ್ ಸಾಲ್ಟ್ ಹಾಗೂ ಡಕೆಟ್ ಮೊದಲ ವಿಕೆಟ್ಗೆ 8.5 ಓವರ್ನಲ್ಲಿ 75 ರನ್ಗಳ ಜೊತೆಯಾಟ ನೀಡಿದ್ದರು. ಆದರೆ ಸಾಲ್ಟ್ ರನ್ ಔಟ್ ಆಗುವ ಮೂಲಕ ಇಂಗ್ಲೆಂಡ್ ತಂಡದ ದೊಡ್ಡ ಮೊತ್ತದ ಗುರಿಯ ಕನಸು ನುಚ್ಚು ನೂರಾಯಿತು. ಸಾಲ್ಟ್ ಕೇವಲ 26 ಎಸೆತಗಳಲ್ಲಿ 43 ರನ್ಗಳಿಸಿದ್ದರು. ಇದರಲ್ಲಿ 5 ಬೌಂಡರಿ, 3 ಸಿಕ್ಸರ್ಗಳಿದ್ದವು. ಇವರ ಬೆನ್ನಲ್ಲೇ 29 ಎಸೆತಗಳಲ್ಲಿ 32 ರನ್ಗಳಿಸಿದ್ದ ಡಕೆಟ್ ಹಾಗೂ ಬ್ರೂಕ್ ಖಾತೆ ತೆರೆಯದೇ ಒಂದೇ ಓವರ್ನಲ್ಲಿ ಹರ್ಷಿತ್ ರಾಣಾಗೆ ವಿಕೆಟ್ ನೀಡಿದರು.
75ಕ್ಕೆ 0 ಇದ್ದ ಇಂಗ್ಲೆಂಡ್ 77ಕ್ಕೆ3 ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಈ ಹಂತದಲ್ಲಿ ಒಂದಾದ ನಾಯಕ ಜೋಸ್ ಬಟ್ಲರ್ ಹಾಗೂ ಜೋ ರೂಟ್ 4ನೇ ವಿಕೆಟ್ಗೆ 34 ರನ್ ಸೇರಿಸಿದರು. ಆದರೆ ಜಡೇಜಾ ಬೌಲಿಂಗ್ನಲ್ಲಿ 15 ತಿಂಗಳ ನಂತರ ಏಕದಿನಕ್ಕೆ ಮರಳಿದ್ದ ರೂಟ್ ಎಲ್ಬಿ ಬಲೆಗೆ ಬಿದ್ದರು. ನಂತರ ನಾಯಕನ ಜೊತೆ ಸೇರಿದ ಯುವ ಆಟಗಾರ ಬೆಥೆಲ್ 87 ಎಸೆತಗಳಲ್ಲಿ 58 ರನ್ಗಳ ಜೊತೆಯಾಟ ನೀಡಿದರು. ಇದು ಪಂದ್ಯದ ಎರಡನೇ ಗರಿಷ್ಠ ಜೊತೆಯಾಟವಾಯಿತು.
ಉತ್ತಮವಾಗಿ ಆಡುತ್ತಿದ್ದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಪಾಂಡ್ಯಗೆ ಸುಲಭ ಕ್ಯಾಚ್ ನೀಡಿ ಔಟ್ ಆದರು. ಔಟಾಗುವ ಮುನ್ನ ಅವರು 67 ಎಸೆತಗಳಲ್ಲಿ 4 ಬೌಂಡರಿ ಸಹಿತ 52 ರನ್ಗಳಿಸಿದ್ದರು. ಆದರೆ ಜಾಕೋಬ್ ಬೆಥೆಲ್ 64 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ನೊಂದಿಗೆ 51ರನ್ಗಳಿಸಿದರು. ಇನ್ನು ಲಿವಿಂಗ್ಸ್ಟೋನ್ (5), ಬ್ರಿಡನ್ ಕಾರ್ಸ್ (10) ಆದಿಲ್ ರಶೀದ್ (8) ಅಲ್ಪ ಮೊತ್ತಕ್ಕೆ ಔಟ್ ಆದರು. ಜೋಫ್ರಾ ಆರ್ಚರ್ ಅಜೇಯ 21 ರನ್ಗಳಿಸಿ 260-70ರ ಗಡಿ ದಾಟಿಸುವ ಮುನ್ಸೂಚನೆ ನೀಡಿದ್ದರು. ಆದರೆ ಅವರಿಗೆ ಸೂಕ್ತ ಬೆಂಬಲ ಸಿಗದಿದ್ದಕ್ಕೆ ಇನ್ನು 14 ಎಸೆತಗಳಿರುವಂತೆ ಇಂಗ್ಲೆಂಡ್ ಆಲೌಟ್ ಆಯಿತು.