ಕೃಷ್ಣನೂರಿನ ರಂಗನಾಥ್ ಆಚಾರ್ ಮನೆಗೆ ಬಂತು ಪ್ರಧಾನಿ ಮೋದಿಗೆ ಸಿಕ್ಕಿದ ಗಿಫ್ಟ್!

ರಕ್ಷಿತ್ ಬೆಳಪು

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಕಾರ್ತೀಕೇಯ ದೇವರ ಪೋಟೊವನ್ನು ತಮಿಳುನಾಡು ಮೂಲದವರು ಉಡುಗೊರೆ ರೂಪದಲ್ಲಿ ನೀಡಿದ್ದರು. ಆದರೆ ಈ ಪೋಟೊ ಈಗ ಉಡುಪಿಯಲ್ಲಿದೆ ಎಂದರೇ ನೀವು ನಂಬುತ್ತೀರಾ..!

ಹೌದು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆ ರೂಪದಲ್ಲಿ ನೀಡಿದ ದೇವರ ಪೋಟೋವನ್ನು ಉಡುಪಿ ಅಂಬಲಪಾಡಿಯ ನಿವಾಸಿ, ಲೆಕ್ಕಪರಿಶೋಧಕ ಕೆ.ರಂಗನಾಥ್ ಆಚಾರ್ ಹರಾಜಿನಲ್ಲಿ ಖರೀದಿಸಿ, ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಿದ್ದಾರೆ.

ನಮಾಮಿ ಗಂಗಾ ಯೋಜನೆಗೆ ಭಾರತದ ಪ್ರಧಾನಿಯವರು ವಿವಿಧೆಡೆ ಭೇಟಿ ನೀಡಿದಾಗ ದೊರಕುವ ಉಡುಗೊರೆ, ಐಷರಾಮಿ ವಸ್ತುಗಳು ಹಾಗು ಇನ್ನಿತರ ಎಲ್ಲಾ ವಸ್ತುಗಳನ್ನು ಹರಾಜು ಹಾಕಿ, ಅದರಿಂದ ಬರುವ ಹಣವನ್ನು ಉತ್ತಮ ಕಾರ್ಯಕ್ಕೆ ವಿನಿಯೋಗಿಸುವುದು ವಾಡಿಕೆ. ಅದರಂತೆ 2021ರಲ್ಲಿ ಕೇಂದ್ರ ಸರ್ಕಾರ ಪ್ರಧಾನಿಯವರ ಉಡುಗೊರೆಯ ಹರಾಜಿನಿಂದ ಬಂದ ಹಣವನ್ನು ನಮಾಮಿ ಗಂಗಾ ಯೋಜನೆಗೆ ಬಳಸುತ್ತೇವೆ ಎಂದು ಘೋಷಿಸಿದ್ದರು.

ಪ್ರಧಾನಿ ಕಚೇರಿಯ ಅಧಿಕೃತ ಹರಾಜು ಪ್ರಕ್ರಿಯೆ ನಡೆಯುವ ವೆಬ್‌ಸೈಟ್‌ನಲ್ಲಿ ಹರಾಜು ನಡೆಯಲಿರುವ ವಸ್ತುಗಳ ಮಾಹಿತಿ ಇದ್ದು, ಸಾವಿರ ರೂಪಾಯಿನಿಂದ ಕೋಟಿ ರೂಪಾಯಿಯವರೆಗೆ ಹರಾಜು ಪ್ರಕ್ರಿಯೆ ನಡೆದಿದೆ. ಅದರಲ್ಲಿ ಮೋದಿಯವರ ಹುಟ್ಟುಹಬ್ಬಕ್ಕೆ ತಮಿಳುನಾಡು ಮೂಲದವರು ನೀಡಿದ ಕಾರ್ತಿಕೇಯ ದೇವರ ಪೋಟೊವನ್ನು ಉಡುಪಿಯ ರಂಗನಾಥ್ ಆಚಾರ್ ಖರೀದಿಸಿದ್ದಾರೆ. ಉಡುಪಿಯಲ್ಲಿ ಸಿಎಯಾಗಿ ವೃತ್ತಿ ನಡೆಸುತ್ತಿರುವ ರಂಗನಾಥ್ ಆಚಾರ್ ಅವರು ವಿವಿಧ ವೆಬ್ ಸೈಟ್‌ಗಳಿಗೆ ಆರ್ಥಿಕತೆಯ ಕುರಿತಾಗಿ ಲೇಖನಗಳನ್ನು ಬರೆಯುತ್ತಾರೆ. ಜೊತೆಗೆ ಪುಸ್ತಕವನ್ನು ಬರೆದಿದ್ದು, ಮುದ್ರಣ ಹಂತದಲ್ಲಿದೆ.

ಸ್ನೇಹಿತರ ತಂಡವೂ ಸಿದ್ಧ

ಕಳೆದ ವರ್ಷ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ, ದೇವರ ಪೋಟೊ ಖರೀದಿಸಿದ ರಂಗನಾಥ್ ಆಚಾರ್ ಅವರು ತಮ್ಮ ಅನುಭವವನ್ನು ವ್ಯಾಟ್ಸಾಪ್ ಗ್ರೂಪ್ ಮೂಲಕ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಈ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ರಂಗನಾಥ್ ಅವರ ಸ್ನೇಹಿತರ ತಂಡವೂ ಸಿದ್ಧವಾಗಿದೆ.

ಅತಿಥಿಗಳಿಗೆ ಇದು ಪ್ರೇರಣೆಯಾಗಲಿ
ತಮಿಳುನಾಡಿನಲ್ಲಿ ಕಾರ್ತಿಕೇಯ ಹೆಸರಿನಲ್ಲಿ ಪೂಜಿಸುವ ದೇವರನ್ನು ಕರ್ನಾಟಕದಲ್ಲಿ ಸುಬ್ರಹ್ಮಣ್ಯ ಎಂದು ಪೂಜಿಸುತ್ತಾರೆ. ತಮಿಳುನಾಡಿನ ಅಭಿಮಾನಿಗಳು ಮೋದಿಯವರ ಮೇಲಿನ ಅಪಾರ ಪ್ರೀತಿಯಿಂದ ಉಡುಗೊರೆಯನ್ನು ನೀಡಿದ್ದಾರೆ. ಉಡುಪಿಯ ಅಭಿಮಾನಿ ಮೋದಿಯವರ ಕಾರ್ಯವೈಖರಿ ಮತ್ತು ಸದುದ್ದೇಶವನ್ನು ಮೆಚ್ಚಿ ತನ್ನ ಕಿಂಚಿತ್ತು ಸೇವೆ ಇರಲಿ ಎಂಬ ಕಾರಣಕ್ಕೆ ಹರಾಜಿನಲ್ಲಿ ಭಾಗವಹಿಸಿದ್ದಾರೆ, ಜೊತೆಗೆ ಕೇವಲ ಹಣ ನೀಡಿದರೇ ನೆನಪಿನಲ್ಲಿ ಉಳಿಯುವುದಿಲ್ಲ. ಸ್ಮರಣಿಕೆ ಇದ್ದರೇ ನೆನಪಿನಲ್ಲಿ ಉಳಿಯುವುದರ ಜೊತೆಗೆ ಮನೆಗೆ ಬರುವ ಅತಿಥಿಗಳಿಗೆ ಇದು ಪ್ರೇರಣೆಯಾಗಲಿ ಎಂದು ಖರೀದಿಸಿದ್ದಾರೆ.

ಸ್ಥಳೀಯ ಪತ್ರಿಕೆಯೊಂದರಲ್ಲಿ ಹರಾಜಿನ ಬಗ್ಗೆ ಮಾಹಿತಿ ತಿಳಿದು ಭಾಗವಹಿಸಿದೆ. ಸುಬ್ರಹ್ಮಣ್ಯ ದೇವರ ಪೋಟೊವನ್ನು ಖರೀದಿಸಿದ್ದೇನೆ. ಈ ಹಣವನ್ನು ನಮಾಮಿ ಗಂಗಾ ಯೋಜನೆಗೆ ಬಳಸುತ್ತಾರೆ ಎಂದು ತಿಳಿದು ಸಂತೋಷವಾಯಿತು. ಬಾಲ್ಯದಲ್ಲಿ ತಂದೆಯೊಂದಿಗೆ ಗಂಗೋತ್ರಿ, ಘರ್ ಮುಕ್ತೇಶ್ವರ್, ಪ್ರಯಾಗ್ ರಾಜ್, ಕಾನ್ಪುರ, ಪಾಟ್ನಾ, ಕಲ್ಕತ್ತಾ ಭಾಗದಲ್ಲಿ ಪ್ರವಾಸ ಹೋದ ಅನುಭವ ಇದೆ. ಈ ಮಹತ್ಕಾರ್ಯಕ್ಕೆ ನನ್ನ ಕಿಂಚಿತ್ತು ಸೇವೆ ನೀಡಿದ್ದು ಖುಷಿ ತಂದಿದೆ. ಈ ವರ್ಷವೂ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇನೆ ಎಂದು ರಂಗನಾಥ್ ಆಚಾರ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!